ನ್ಯೂಸ್

ಅಂತರ್ಜಾಲ ನಂಬಿ ಮೋಸಹೋಗದಿರಿ; ವಿಆರ್​ಎಲ್ ಕಂಪನಿ ಹೆಸರು ಹೇಳಿ ವಂಚನೆ

ಮಂಗಳೂರು: ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನಷ್ಟೇ ಪಡೆದು ಹಣಕಾಸು ವ್ಯವಹಾರ ನಡೆಸುವವರೇ ಎಚ್ಚರಿಕೆಯಿಂದಿರಿ. ನೀವು ಸುಲಭವಾಗಿ ಮೋಸ ಹೋಗಬಹುದು. ಇಂಥ ವಂಚನೆಯ ಲೇಟೆಸ್ಟ್ ಪ್ರಕರಣವೊಂದು ಇಲ್ಲಿದೆ.

ಮಂಗಳೂರಿನ ವೈದ್ಯೆಯೊಬ್ಬರಿಗೆ ಗುಜರಾತ್​ನಲ್ಲಿ ಕೆಲಸ ಸಿಕ್ಕಿತ್ತು. ಅವರು ಅಲ್ಲಿಗೆ ಕಾರನ್ನು ಕೊಂಡೊಯ್ಯಬೇಕಿತ್ತು. ಅದಕ್ಕಾಗಿ ಗೂಗಲ್​ನಲ್ಲಿ ಟ್ರಾನ್ಸ್​ಪೋರ್ಟ್ ಕಂಪನಿಯನ್ನು ಸರ್ಚ್ ಮಾಡಿ, ಅದರಲ್ಲಿ ಸಿಕ್ಕಿದ ಫೋನ್ ನಂಬರ್​ಗೆ ಕರೆ ಮಾಡಿದ್ದಾರೆ. ವ್ಯಕ್ತಿಯೊಬ್ಬ ವಿಆರ್​ಎಲ್ ಕಂಪನಿ ಹೆಸರು ಹೇಳಿ 14 ಸಾವಿರ ರೂ. ಪಾವತಿಸಿದರೆ ಗುಜರಾತ್​ಗೆ ಕಾರು ಕೊಂಡೊಯ್ಯಬಹುದು, ಕರೊನಾ ಇರುವ ಕಾರಣ ಕಚೇರಿ ತೆರೆದಿಲ್ಲ, ಮನೆ ಎಲ್ಲಿ ಎಂದು ತಿಳಿಸಿದರೆ ಮನೆಗೆ ಬಂದು ಕಾರು ಕೊಂಡೊಯ್ಯುವುದಾಗಿ ತಿಳಿಸಿದ್ದ. ಅದರಂತೆ ಜೂ.23ರಂದು ಮಧ್ಯಾಹ್ನ ಚಾಲಕ ಬಂದು ಕಾರನ್ನು(ಕೆಲವೊಂದು ಮನೆಯ ಸಾಮಗ್ರಿ ಸಹಿತ) ಕೊಂಡೊಯ್ದ. ಕಂಪನಿ ತಿಳಿಸಿದಂತೆ 12 ಸಾವಿರ ರೂ.ವನ್ನು ಪೇಟಿಎಂ ಮೂಲಕ ಪಾವತಿಸಿ ಒಂದು ಸಾವಿರ ರೂ. ನಗದನ್ನು ಚಾಲಕನ ಕೈಯಲ್ಲಿ ಕೊಡಲಾಗಿತ್ತು. ಕಾರು ಐದು ದಿನಗಳಲ್ಲಿ ಗುಜರಾತ್ ತಲುಪುವುದಾಗಿ ಚಾಲಕ ತಿಳಿಸಿದ್ದ. ವೈದ್ಯೆ ವಿಮಾನ ಮೂಲಕ 27ರಂದು ಗುಜರಾತ್ ತಲುಪಿದರು. 28ರಂದು ಅವರ ವಾಟ್ಸ್​ಆಪ್​ಗೆ 38 ಸಾವಿರ ರೂ. ಬಿಲ್ ಬಂತು. ಬಳಿಕ ಫೋನ್ ಮಾಡಿದ ಚಾಲಕ ಈ ಮೊತ್ತವನ್ನು ಪೇಟಿಎಂ ಮಾಡಬೇಕು, ಕಾರು ಗುಜರಾತ್​ಗೆ ತಲಪುತ್ತದೆ ಎಂದ. ಶೇ.3 ಇನ್ಶೂರೆನ್ಸ್ ಹಾಗೂ ಶೇ.18 ಜಿಎಸ್​ಟಿ ಎಂದ, ಜಿಎಸ್​ಟಿ ಬಿಲ್ ಬೇರೆ ಕಂಪನಿಯದಾಗಿತ್ತು. ಗಂಟೆಗೊಮ್ಮೆ ಫೋನ್ ಮಾಡಿ ಹಣ ರವಾನಿಸುವಂತೆ ಪೀಡಿಸತೊಡಗಿದ. ಮೊದಲು ಗಾಡಿ ತಂದು ನಿಲ್ಲಿಸಿ ಬಳಿಕ ಮಾತನಾಡುವಂತೆ ವೈದ್ಯೆ ಒತ್ತಾಯಿಸಿದರು. ಇದಕ್ಕೆ ಒಪ್ಪದ ಚಾಲಕ, ಹಣ ನೀಡದಿದ್ದರೆ ಕಾರು ಸಿಗದು ಎಂದು ಬೆದರಿಕೆ ಹಾಕತೊಡಗಿದ.

ಕೊನೆಗೆ ವೈದ್ಯೆ ಗುಜರಾತ್ ಪೊಲೀಸರಿಗೆ ವಿಚಾರ ತಿಳಿಸಿದರು. ಆದರೆ ಅವರು ಕಾರು ಹೊರಟ ಸ್ಥಳದಲ್ಲೇ ಕೇಸ್ ಮಾಡಬೇಕು ಎಂದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರಲ್ಲಿ ಮಾತನಾಡಿ, ಇಲ್ಲಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಎಫ್​ಐಆರ್ ಪ್ರತಿಯನ್ನು ಗುಜರಾತ್ ಪೊಲೀಸರಿಗೂ ಕಳುಹಿಸಲಾಯಿತು. ಇದರ ನಡುವೆ ಚಾಲಕನ ಧಮ್ಕಿ ಬರುತ್ತಲೇ ಇತ್ತು. ಅಲ್ಲದೆ, ವೈದ್ಯೆಯ ಫಾಸ್ಟ್ಯಾಗ್ ಖಾತೆಯಿಂದ ಟೋಲ್ ಬೂತ್​ಗಳಲ್ಲಿ ಸುಂಕ ಕಡಿತಗೊಳ್ಳುವ ಮೆಸೇಜ್ ಬರತೊಡಗಿದವು. ಇದನ್ನು ಗುಜರಾತ್ ಪೊಲೀಸರಿಗೆ ತಿಳಿಸಲಾಯಿತು. ಇದರ ಆಧಾರದಲ್ಲಿ ಜು.4ರಂದು ಸಂಜೆ ಪೊಲೀಸರು ಚಾಲಕನನ್ನು ಕಾರು ಸಹಿತ ಪತ್ತೆ ಮಾಡಿ ಬಂಧಿಸಿ ಸ್ಟೇಷನ್​ಗೆ ಕರೆತಂದರು. ವಿಚಾರಣೆಯಲ್ಲಿ ಇಂಥ ಹಲವು ಕೃತ್ಯಗಳನ್ನು ಈತ ಹಾಗೂ ಸ್ನೇಹಿತರು ಸೇರಿ ಮಾಡಿರುವುದು ತಿಳಿದುಬಂದಿದೆ.

ಪೊಲೀಸರಿಗೆ ಧನ್ಯವಾದ: ಕಾರನ್ನು ಪೊಲೀಸರು ಭಾನುವಾರ ವೈದ್ಯೆಗೆ ಹಸ್ತಾಂತರಿಸಿದ್ದಾರೆ, ಈ ಬಗ್ಗೆ ವೈದ್ಯೆಯ ಕುಟುಂಬದವರು ಮಂಗಳೂರು ಪೊಲೀಸ್ ಆಯುಕ್ತರು, ಸೈಬರ್ ಕ್ರೖೆಂ ಪೊಲೀಸರು ಹಾಗೂ ಗುಜರಾತ್ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.