ONGC Gas Leak: ಆಂಧ್ರಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಗದ್ದಾಡ ಗ್ರಾಮದ ಬಳಿ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ರಿಗ್ನಿಂದ ಗ್ಯಾಸ್ ಸೋರಿಕೆಯಾಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗದ್ದಾಡ–ಮಾಮಿಡಿಕುದುರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಮಾಮಿಡಿಕುದುರು ಮಂಡಲದ ಗದ್ದಾಡ ಗ್ರಾಮದ ಸಮೀಪ ಒಎನ್ಜಿಸಿ ಸಂಸ್ಥೆಯ ರೀ-ಡ್ರಿಲ್ಲಿಂಗ್ ಮಾಡುತ್ತಿದ್ದ ಬಾವಿಯಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್ ಹೊರಬರುತ್ತಿದೆ ಎಂದು ವರದಿಯಾಗಿದೆ. ಸೋರಿಕೆಯಾದ ಗ್ಯಾಸ್ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದ್ದು, ಸ್ಥಳೀಯರು ತೀವ್ರವಾದ ಗ್ಯಾಸ್ ವಾಸನೆ ಬರುತ್ತಿರುವುದಾಗಿ ತಿಳಿಸಿದ್ದಾರೆ.
ರಿಗ್ನಿಂದ ಗ್ಯಾಸ್ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ತಡೆದಿದ್ದಾರೆ.
ಘಟನೆ ಕುರಿತು ಒಎನ್ಜಿಸಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗ್ಯಾಸ್ ಸೋರಿಕೆಯನ್ನು ನಿಯಂತ್ರಿಸಲು ವಿಶೇಷ ತಜ್ಞರ ತಂಡಗಳನ್ನು ಸ್ಥಳಕ್ಕೆ ಕರೆಸಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ, ಸೋರಿಕೆಯ ಪ್ರಮಾಣ ಎಷ್ಟು ಮತ್ತು ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಷ್ಟು ಸಮಯ ಬೇಕಾಗಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಗದ್ದಾಡದಲ್ಲಿ ನಡೆದಿರುವ ಈ ಘಟನೆ ಕೋನಸೀಮಾ ಭಾಗದ ಜನರಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ. ಇದಕ್ಕೂ ಮೊದಲು 2026ರ ಜನವರಿ 5ರಂದು ಮಲಿಕಿಪುರಂ ಮಂಡಲದ ಇರಸುಮಂಡ ಗ್ರಾಮದ ಒಎನ್ಜಿಸಿಯ ಮೋರೀ-5 ಬಾವಿಯಲ್ಲಿ ಭಾರೀ ಅನಿಲ ಸೋರಿಕೆ ಸಂಭವಿಸಿತ್ತು.
ಬಾವಿಯಲ್ಲಿ ವರ್ಕ್ಓವರ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬ್ಲೋಔಟ್ ಸಂಭವಿಸಿ, ನಂತರ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿಯ ಗಂಭೀರತೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ತುರ್ತು ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
ಇದಲ್ಲದೆ, ನವೆಂಬರ್ 2ರಂದು ಪಸರ್ಲಪುಡಿ ಲಂಕಾ ಪ್ರದೇಶದ ಬಳಕೆಯಲ್ಲಿಲ್ಲದ ಒಎನ್ಜಿಸಿಬಾವಿಯೊಂದರಲ್ಲಿ ಮತ್ತೊಂದು ಗ್ಯಾಸ್ ಸೋರಿಕೆ ವರದಿಯಾಗಿತ್ತು. ಬಾವಿಗೆ ಅಳವಡಿಸಿದ್ದ ತುಕ್ಕು ಹಿಡಿದ ಬೋಲ್ಟ್ನಿಂದ ಸೋರಿಕೆ ಉಂಟಾಗಿದೆ ಎಂದು ಅಧಿಕಾರಿಗಳು ಆಗ ತಿಳಿಸಿದ್ದರು.
ಹೀಗೆ ಕೆಲವೇ ತಿಂಗಳ ಅಂತರದಲ್ಲಿ ಒಎನ್ಜಿಸಿ ಬಾವಿಗಳಿಗೆ ಸಂಬಂಧಿಸಿದಂತೆ ಸತತ ಗ್ಯಾಸ್ ಸೋರಿಕೆ ಘಟನೆಗಳು ವರದಿಯಾಗುತ್ತಿರುವುದು ಕೋನಸೀಮಾ ಭಾಗದ ನಿವಾಸಿಗಳ ಆತಂಕವನ್ನು ಹೆಚ್ಚಿಸಿದೆ.