ನ್ಯೂಸ್

ಕ್ಷುಲ್ಲಕ ವಿಚಾರವಾಗಿ ಯುವಕರ ನಡುವೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ನಡೆದಿದೆ.

ಟ್ಯಾಂಕ್ ಮೊಹಲ್ಲಾ ನಿವಾಸಿ ರಾಹಿಲ್ (25) ಕೊಲೆಯಾದ ಯುವಕ. ಅದೇ ಏರಿಯಾದ ಅಸ್ಗರ್ ಖಾನ್ ಕೊಲೆ ಮಾಡಿದ ಆರೋಪಿ. ಅಪಘಾತ ಪ್ರಕರಣ ಸಂಬಂಧ ಭಾನುವಾರ ರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಇಂದು ಕೂಡ ಅದೇ ವಿಚಾರವಾಗಿ ಇಬ್ಬರು ಮಾತಿಗೆ ಮಾತು ಬೆಳೆಸಿದ್ದು, ಈ ವೇಳೆ ರಾಹಿಲ್​ಗೆ ಆರೋಪಿ ಅಸ್ಗರ್ ಚಾಕು ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ. ಆರೋಪಿ ಅಸ್ಗರ್ ನನ್ನು ಕೋಟೆ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.