ನ್ಯೂಸ್

ಕಾಲೇಜು ವಾರ್ಷಿಕೋತ್ಸವ ಮುಗಿಸಿ ಮರಳುತ್ತಿದ್ದ ವಿದ್ಯಾರ್ಥಿ ಮಾರ್ಗಮಧ್ಯೆಯೇ ಪ್ರಾಣ ಕಳ್ಕೊಂಡ!

ಬಳ್ಳಾರಿ: ಅವರಿಬ್ಬರು ವಿದ್ಯಾರ್ಥಿಗಳು ಕಾಲೇಜು ವಾರ್ಷಿಕೋತ್ಸವ ಮುಗಿಸಿಕೊಂಡು ಅದೇ ಖುಷಿಯಲ್ಲಿ ಮನೆಗೆ ಮರಳುತ್ತಿದ್ದರು. ಆದರೆ ಅವರಿಬ್ಬರ ಪೈಕಿ ಒಬ್ಬ ಮನೆಗೆ ತಲುಪುವ ಮುನ್ನವೇ ಮನೆಯವರಿಗೆಲ್ಲ ನೋವು ಕೊಟ್ಟು ಹೋದಂತಾಗಿದೆ. ಅರ್ಥಾತ್, ಒಬ್ಬ ವಿದ್ಯಾರ್ಥಿ ಮಾರ್ಗಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾನೆ.

ಬಳ್ಳಾರಿ‌ ತಾಲೂಕಿನ ಜಾಲಿಹಾಳ್ ಗ್ರಾಮದ ಪ್ರಶಾಂತ್ ಕುಮಾರ್ (18) ಸಾವಿಗೀಡಾದ ವಿದ್ಯಾರ್ಥಿ. ಹಿಂಬದಿ ಸವಾರ ಪ್ರವೀಣ್ ಕುಮಾರ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರೂ ಕಾಲೇಜಿನ ವಾರ್ಷಿಕೋತ್ಸವ ಮುಗಿಸಿಕೊಂಡು ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಿಂದ ಈ ಸಾವು-ನೋವು ಸಂಭವಿಸಿದೆ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರೂ ಬಸವರಾಜೇಶ್ವರಿ ಕಾಲೇಜಿ‌ನ ಪಿಯುಸಿ ವಿದ್ಯಾರ್ಥಿಗಳು.

ಇಬ್ಬರೂ ಬೈಕ್​ನಲ್ಲಿ ಮರಳುತ್ತಿದ್ದಾಗ, ಕಾಲೇಜ್​ ಬಸ್ ಓವರ್​ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಓವರ್​ಟೇಕ್ ಮಾಡುವಾಗ ಬೈಕ್ ಸ್ಕಿಡ್ ಆಗಿ ಹಿಂದಿನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಇನ್ನೊಬ್ಬ ಗಾಯಗೊಂಡಿದ್ದಾನೆ. ಬಳ್ಳಾರಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.