ನವದೆಹಲಿ: ಒಂದೇ ಕುಟುಂಬದ ಸದಸ್ಯರ ಆಧಾರ್ ಪಿವಿಸಿ ಕಾರ್ಡ್ ಅನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆರ್ಡರ್ ಮಾಡಬೇಕಾಗಿಲ್ಲ. ಆಯಾ ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಎಲ್ಲರ ಆಧಾರ್ ಪಿವಿಸಿ ಕಾರ್ಡ್ಗಳನ್ನು ಆರ್ಡರ್ ಮಾಡಬಹುದು!
ಯುಐಡಿಎಐ ಕಳೆದ ತಿಂಗಳಷ್ಟೇ ಆಧಾರ್ ಪಿವಿಸಿ ಕಾರ್ಡ್ ಅನ್ನು ಪರಿಚಯಿಸಿದೆ. ಕ್ರೆಡಿಟ್/ಡೆಬಿಟ್ ಅಥವಾ ಪ್ಯಾನ್ಕಾರ್ಡ್ ಮಾದರಿಯ ಈ ಕಾರ್ಡ್ ಪಡೆಯುವುದಕ್ಕೆ ನಿಗದಿತ 50 ರೂಪಾಯಿ ಶುಲ್ಕ ಪಾವತಿಸಿದರೆ ಸಾಕು. ಈ ಕಾರ್ಡ್ ದೀರ್ಘ ಬಾಳಿಕೆಯದಾಗಿದ್ದು, ಮಳೆ, ಬಿಸಿಲುಗಳಿಗೆ ಹಾನಿಯಾಗುವಂಥದ್ದಲ್ಲ ಎಂದು ಅದು ತಿಳಿಸಿತ್ತು. ಅವರವರ ಕಾರ್ಡ್ಗಳನ್ನು ಅವರವರೇ ಆರ್ಡರ್ ಮಾಡಿ ತರಿಸುವುದಕ್ಕೆ ಅವಕಾಶ ನೀಡಿತ್ತು.
ಇದನ್ನೂ ಓದಿ: ಹೊಸ ಅವತಾರದಲ್ಲಿ ಬರ್ತಾ ಇದೆ ಆಧಾರ್
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದೇ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಆ ಕುಟುಂಬ ಸದಸ್ಯರಲ್ಲಿ ಯಾರಾದರೊಬ್ಬರು ಅವರ ಮೊಬೈಲ್ ಸಂಖ್ಯೆ ನಮೂದಿಸಿ ಪಡೆದುಕೊಳ್ಳಬಹುದು. ಇದಕ್ಕೆ ಪ್ರತಿ ಕಾರ್ಡಿಗೆ ನಿಗದಿತ ಶುಲ್ಕ ಪಾವತಿಸಿದರೆ ಸಾಕು. ಈ ಆರ್ಡರ್ ನೀಡುವುದಕ್ಕೆ ಬಳಸುವ ಮೊಬೈಲ್ಗೆ ಒಟಿಪಿ ದೃಢೀಕರಣ ಸಂದೇಶ ಬರುತ್ತದೆ. ಅದನ್ನು ಬಳಸಿಕೊಂಡು ಆರ್ಡರ್ ನೀಡಬಹುದು ಎಂದು ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ.
ಆಧಾರ್ ಪಿವಿಸಿ ಕಾರ್ಡ್ ಗೆ ಆರ್ಡರ್ ಮಾಡಬೇಕಾದ ವೆಬ್ ಲಿಂಕ್ ಇಲ್ಲಿದೆ - https://residentpvc.uidai.gov.in/order-pvcreprint