ನ್ಯೂಸ್

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್​ವೈ; ರಾಜಕೀಯ ಚಾಣಾಕ್ಷತನಕ್ಕೆ ಮತ್ತೊಂದು ಸಾಕ್ಷಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಮೂಲಕ ಚಾಣಾಕ್ಷತನ ಮೆರೆದಿದ್ದಾರೆ. ಆ ಮೂಲಕ ಈಚಿನ ಒಟ್ಟಾರೆ ರಾಜಕೀಯ ಪ್ರಹಸನದಲ್ಲಿ ಅವರು ಒಂದು ಹೆಜ್ಜೆ ಮುಂದಿದ್ದಾರೆ. ಯಡಿಯೂರಪ್ಪ ಸ್ಥಾನ ಪಲ್ಲಟಕ್ಕೆ ಹೈಕಮಾಂಡ್ ಯತ್ನಿಸುತ್ತಿದೆ ಎಂಬ ವದಂತಿಗಳ ನಡುವೆಯೇ, ಅವರು ವರಿಷ್ಠರಿಗೆ ಸವಾಲು ಹಾಕಿದ್ದಾರೆ.

ಇನ್ನೊಂದೆಡೆ ಲಿಂಗಾಯತ ಸಮುದಾಯವನ್ನು ತಮ್ಮ ಪರ ಗಟ್ಟಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಒಂದು ವರ್ಷ ತುಂಬಿದ ದಿನದಿಂದಲೂ ಅವರ ನಾಯಕತ್ವ ಬದಲಾಗುತ್ತದೆ ಎಂದು ಪಕ್ಷದಲ್ಲಿನ ಅವರ ವಿರೋಧಿ ಗುಂಪು ಪ್ರಚಾರ ಮಾಡುತ್ತಲೇ ಇದೆ. ವರಿಷ್ಠರ ಬಳಿಯೂ ಅವರ ಬಗ್ಗೆ ಈ ಗುಂಪು ‘ಅಸಂತೋಷ’ ವ್ಯಕ್ತಪಡಿಸುತ್ತಿದೆ. ಅದೆಲ್ಲಕ್ಕೂ ಸೆಡ್ಡು ಹೊಡೆಯುವ ರೀತಿಯಲ್ಲಿ ಯಡಿಯೂರಪ್ಪ ಹೆಜ್ಜೆಯನ್ನಿಟ್ಟಿದ್ದಾರೆ.

ತಮ್ಮನ್ನು ನಂಬಿ ಬಂದವರನ್ನು ಎಂದಿಗೂ ಕೈಬಿಡದ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದರು. ಎರಡು ಮೂರು ಬಾರಿ ದೆಹಲಿಗೆ ಹೋದರೂ ಹಿರಿಯ ನಾಯಕನಿಗೆ ಸಿಗಬೇಕಾದ ಮನ್ನಣೆ ವರಿಷ್ಠರಿಂದ ಸಿಗಲಿಲ್ಲ. ಈ ಕಡೆಗಣನೆ ಸಹಜವಾಗಿಯೇ ಅವರನ್ನು ಕೆರಳಿಸಿದೆ. ಆದ್ದರಿಂದಲೇ ಅವರು ಎಲ್ಲದಕ್ಕೂ ಸಿದ್ಧವಾಗಿರುವ ಸಂದೇಶವನ್ನು ವರಿಷ್ಠರಿಗೆ ಕಳುಹಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ನಿಲುವೇನು?

ಮುಖ್ಯಮಂತ್ರಿ ಯಡಿಯೂರಪ್ಪ ಎರಡು ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹೈಕಮಾಂಡ್ ಹಾಗೂ ವಿರೋಧಿ ಬಣಕ್ಕೆ ತಿರುಗೇಟು ನೀಡಿದ್ದಾರೆ. ಆ ಮೂಲಕ ತಮ್ಮ ಹಿಂದಿನ ಶೈಲಿಯ ಆಡಳಿತಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಅದನ್ನು ಎದುರಿಸಲು ಬೇಕಾದ ರೀತಿಯಲ್ಲಿ ಬಲ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

1. ಹೈಕಮಾಂಡ್ ಅಥವಾ ಪಕ್ಷದ ರಾಜ್ಯ ಮುಖಂಡರನ್ನು ಕೇಳದೇ ತಮ್ಮ ಬೆಂಬಲಿಗರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿದರು. ಐವತ್ತಕ್ಕೂ ಹೆಚ್ಚು ನಿಗಮಗಳಲ್ಲಿ ಬಹುತೇಕ ಕಡೆ ತಮ್ಮ ಆಪ್ತರಿಗೆ ಮಣೆ ಹಾಕಿದರು. ಪಕ್ಷದ ವತಿಯಿಂದ ಸಲ್ಲಿಕೆಯಾಗಿದ್ದ ಪಟ್ಟಿಯಲ್ಲಿದ್ದವರಲ್ಲಿ ಬೆರಳೆಣಿಕೆಯಷ್ಟು ಮಂದಿಯನ್ನು ಮಾತ್ರ ನೇಮಕ ಮಾಡಿದರು.2. ಲಿಂಗಾಯತ ಸಮುದಾಯ ತಮ್ಮ ಜತೆ ಗಟ್ಟಿಯಾಗಿ ನಿಲ್ಲುವಂತೆ ಮಾಡುವ ಮೂಲಕ ತಮ್ಮ ಉತ್ತರಾಧಿಕಾರಿಯ ಪರವಾಗಿಯೂ ಇರುವಂತೆ ಮಾಡಬೇಕೆಂದು ಯತ್ನಿಸಿದ್ದಾರೆ. ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಅನುದಾನ ಒದಗಿಸಿದರು. ಲಿಂಗಾಯತ ಸಮುದಾಯವನ್ನು ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡುವುದಕ್ಕೆ ಸಚಿವ ಸಂಪುಟದಲ್ಲಿ ರ್ಚಚಿಸಲು ಮುಂದಾಗಿದ್ದರು. ಸದ್ಯಕ್ಕೆ ಈ ಪ್ರಸ್ತಾಪ ಮುಂದುವರಿಯದಿದ್ದರೂ, ವರಿಷ್ಠರು ತಮ್ಮ ವಿರುದ್ಧ ಯಾವುದೇ ನಿರ್ಧಾರ ಮಾಡಿದರೂ ಸಮುದಾಯದ ಬೆಂಬಲ ಬೇಕು ಎಂಬುದು ಯಡಿಯೂರಪ್ಪ ಉದ್ದೇಶ.

ಬೆಚ್ಚಿದ ವರಿಷ್ಠರು

‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತು ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿತ್ತು. ಇದೀಗ ಪ್ರತಿಪಕ್ಷದಲ್ಲಿದ್ದಾಗಿನಂತೆ ಗುಡುಗದಿದ್ದರೂ ತಾವು ಇಟ್ಟ ಹೆಜ್ಜೆಯಿಂದ ಹೈಕಮಾಂಡ್ ಬೆಚ್ಚುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಪದಚ್ಯುತರನ್ನಾಗಿಸುವ ನಿರ್ಧಾರವನ್ನು ಆಗಿನ ಪ್ರಧಾನಿ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಪ್ರಕಟಿಸಿದ ನಂತರದಲ್ಲಿ ಕಾಂಗ್ರೆಸ್​ನಿಂದ ದೂರವಾದ ಲಿಂಗಾಯತ ಸಮುದಾಯ ಈಗ ಗಟ್ಟಿಯಾಗಿ ನಿಂತಿರುವುದು ಬಿಜೆಪಿ ಜತೆಯಲ್ಲಿ. ಅದು ಗೊತ್ತಿರುವುದರಿಂದಲೇ ಯಡಿಯೂರಪ್ಪ ಜತೆ ಅಮಿತ್ ಷಾ ದೂರವಾಣಿ ಮೂಲಕ ಮಾತನಾಡಿ, ಯಾವುದೇ ದುಡುಕಿನ ಹೆಜ್ಜೆಯನ್ನಿಡದಂತೆ ಮನವಿ ಮಾಡಿರುವುದು. ದೆಹಲಿಗೆ ಹೋದರೂ ಭೇಟಿಗೆ ಸಿಗದ ಷಾ, ಈಗ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದರೆ ಯಡಿಯೂರಪ್ಪ ಸಂದೇಶ ಮತ್ತು ತಂತ್ರ ಸರಿಯಾಗಿ ಕೆಲಸ ಮಾಡಿದೆ ಎಂದೇ ಅರ್ಥ.

ಸುಮ್ಮನಿರುವರೇ ವರಿಷ್ಠರು?

ಯಡಿಯೂರಪ್ಪ ನಡೆಯಿಂದ ಬೆಚ್ಚಿದಂತೆ ಕಂಡುಬರುತ್ತಿರುವ ವರಿಷ್ಠರು ಇಷ್ಟಕ್ಕೆ ಸುಮ್ಮನಾಗುವರೇ? ಮುಂದಿನ ದಿನಗಳ ಬೆಳವಣಿಗೆಗಳೇ ಇದಕ್ಕೆ ಉತ್ತರ ನೀಡಲಿವೆ. ‘ನನ್ನ ಉತ್ತರಾಧಿಕಾರಿಯನ್ನು ನಾನೇ ಆಯ್ಕೆ ಮಾಡಬೇಕು’ ಎಂಬ ಯಡಿಯೂರಪ್ಪ ಉದ್ದೇಶಕ್ಕೆ ವರಿಷ್ಠರ ಉತ್ತರ ಏನಾಗಿರಲಿದೆ ಎಂಬುದು ಸದ್ಯದ ಕುತೂಹಲ.

ದೊಡ್ಡ ರಿಸ್ಕ್

ಎರಡು ವಿಚಾರದಲ್ಲಿ ಯಡಿಯೂರಪ್ಪ ದೊಡ್ಡ ರಿಸ್ಕ್ ತೆಗೆದುಕೊಂಡರು. ನಿಗಮಗಳಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚು ಅವಕಾಶ ನೀಡಿದರು. ಇದು ಪಕ್ಷದಲ್ಲಿ ದುಡಿದ ಮತ್ತಷ್ಟು ಜನರ ಕಣ್ಣು ಕೆಂಪಾಗುವಂತೆ ಮಾಡಿದರೆ, ಇನ್ನೊಂದೆಡೆ ಹೈಕಮಾಂಡ್ ಒಪ್ಪಿಗೆ ಇಲ್ಲದೇ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಮುಂದಾಗಿದ್ದರು. ಯಾವುದೇ ಸಮುದಾಯವನ್ನು ಒಬಿಸಿಗೆ ಸೇರಿಸಲು ಏಕಾಏಕಿ ಕೇಂದ್ರಕ್ಕೆ ಶಿಫಾರಸು ಮಾಡಲಾಗದು. ಅದಕ್ಕೆ ಕುಲಶಾಸ್ತ್ರೀಯ ಅಧ್ಯಯನ ನಡೆದಿರಬೇಕು. ಅದರ ಜತೆಗೆ ಇಂಥ ಕ್ರಮದಿಂದ ಇತರ ಹಿಂದುಳಿದ ವರ್ಗಗಳನ್ನು ಎದುರು ಹಾಕಿಕೊಳ್ಳಬೇಕಾಗಿ ಬರುತ್ತದೆ. ಮೀಸಲಾತಿಯ ಪ್ರಮಾಣ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ ತರಬೇಕಾಗುತ್ತದೆ. ಇದೆಲ್ಲ ಅವರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.