ನವದೆಹಲಿ: ಶುಕ್ರವಾರ 23,848 ಕರೊನಾ ಹೊಸ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ತಮಿಳುನಾಡು ರಾಜ್ಯದಲ್ಲಿ ದೇಶದ ಒಟ್ಟು ಸೋಂಕಿತ ಪ್ರಮಾಣದಲ್ಲಿ ಶೇ. 85.91 ಇದೆ. ಕರೊನಾ ಸೋಂಕು ಏರಿಕೆಯಿಂದ ಕಳೆದ ಐದು ದಿನಗಳಲ್ಲಿ ಒಂದು ಲಕ್ಷ ಪ್ರಕರಣ ಸಂಖ್ಯೆ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಒಟ್ಟಾರೆ ಪಾಸಿಟಿವ್ ಪ್ರಕರಣ 1.13 ಕೋಟಿ ದಾಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1.98 ಲಕ್ಷ ಮೀರಿದೆ. 24 ತಾಸಿನಲ್ಲಿ 129 ಮಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 1.58 ಲಕ್ಷಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 15,157 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಗುಣಮುಖರ ಸಂಖ್ಯೆ 1.09. ಕೋಟಿಯಷ್ಟಿದೆ. ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ 2.61 ಕೋಟಿ ಮಂದಿ ಸಲಿಕೆ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
8 ಜಿಲ್ಲೆಯಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ: ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಲಾಕ್ಡೌನ್ ಅಥವಾ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪರಬನಿ ಮತ್ತು ಅಕೋಲಾದಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದು, ನವಿಮುಂಬೈ, ಪುಣೆ, ಪನ್ವೆಲ್, ಪರಬನಿಗಳಲ್ಲಿ ರಾತ್ರಿ ಹೊತ್ತು ಕರ್ಫ್ಯೂ ಜಾರಿ ಮಾಡಲಾಗಿದೆ. ಮಾರ್ಚ್ 31ರವರೆಗೆ ಶಾಲಾ- ಕಾಲೇಜು ಗಳನ್ನು ಮುಚ್ಚಿರುವಂತೆ ಆದೇಶಿಸಿರುವ ಸರ್ಕಾರ, ರೆಸ್ಟೋರಂಟ್, ಮಾಲ್ಸ್ ಹಾಗೂ ಥಿಯೇಟರ್ಗಳನ್ನು ರಾತ್ರಿ 10ಗಂಟೆಗೆ ಮುಚ್ಚುವಂತೆ ಆದೇಶಿಸಿದೆ.
ಲಸಿಕೆ ಬಗ್ಗೆ ಹರಿಯಾಣದಲ್ಲಿ ವದಂತಿ: ಕೋವಿಡ್ ಸೋಂಕು ತಡೆಗೆ ನೀಡುತ್ತಿರುವ ಲಸಿಕೆಯಲ್ಲಿ ಹಸುವಿನ ರಕ್ತ ಮತ್ತು ಹಂದಿಯ ಅಂಶ ಇದೆ ಎಂಬ ವದಂತಿ ಹರಿಯಾಣದ ಕೆಲವು ಜಿಲ್ಲೆಗಳಲ್ಲಿ ಹಬ್ಬಿದ್ದರಿಂದ, ಲಸಿಕೆಯ ಅಭಿಯಾನಕ್ಕೆ ಅಡಚಣೆ ಆಯಿತು. ಸೆರೆಂ ಸಂಸ್ಥೆಯ ಲಸಿಕೆಯಲ್ಲಿ ಹಸುವಿನ ರಕ್ತ, ಹಂದಿಯ ಮಾಂಸ ಅಥವಾ ಕೊಬ್ಬಿ ನಂಶ ಇದೆಯಂತೆ. ಇಂಥ ಔಷಧ ನಮಗೆ ಬೇಡ ಎಂದು ಹರಿಯಾಣದ ಉತ್ತರ ಭಾಗದ ಪಾಲ್ವಾಲ್ ಜಿಲ್ಲೆಯಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ನುಹ್ ಜಿಲ್ಲೆಯಲ್ಲೂ ಇದೇ ರೀತಿಯ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲೇ 15 ಸಾವಿರಕ್ಕೂ ಹೆಚ್ಚು: ಮಹಾರಾಷ್ಟ್ರದಲ್ಲಿ ಕೋವಿಡ್-19 ಪರಿಸ್ಥಿತಿ ಮಿತಿಮೀರುತ್ತಿದ್ದು, 15,817 ಪ್ರಕರಣಗಳು ಶುಕ್ರವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ ವರದಿಯಾಗಿದೆ. ಇದು 2021ರಲ್ಲಿ ದೈನಿಕ ಸೋಂಕಿನ ಸಂಖ್ಯೆಯಲ್ಲೇ ಗರಿಷ್ಠವಾಗಿದೆ. 24 ತಾಸಿನಲ್ಲಿ 56 ಮಂದಿ ಮೃತಪಟ್ಟಿದ್ದಾರೆ. ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜರುಗಿಸುವಂತೆ ಕೇಂದ್ರ ಸರ್ಕಾರ ಕೂಡ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರಕ್ಕೆ ಸೂಚಿಸಿದ್ದು, ರಾಜ್ಯ ಆರೋಗ್ಯ ಇಲಾಖೆ 7 ಅಂಶದ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಮಾಡುತ್ತಿದೆ. ಸೋಂಕು ಪೀಡಿತರ ಸಂಪರ್ಕ ಬಂದವರ ಪರೀಕ್ಷೆ, ಸೋಂಕು ಪೀಡಿತರ ಮೊದಲ ಸಂಪರ್ಕ ಬಂದವರನ್ನು ಪತ್ತೆ ಹಚ್ಚುವಿಕೆ, ಹಾಟ್ ಸ್ಪಾಟ್ಗಳಲ್ಲಿ ಸಾಮೂಹಿಕ ಪರೀಕ್ಷೆ ಹೆಚ್ಚಳ, ಸತ್ತವರ ಸಂಖ್ಯೆಯ ಪರಿಶೀಲನೆಗಳು ಇದರಲ್ಲಿ ಸೇರಿವೆ.
ಒಟ್ಟು ಸೋಂಕು: 1,13,32,494 ಸಕ್ರಿಯ: 1,98,862 ಚೇತರಿಕೆ: 1,09,79,521 ಒಟ್ಟು ಸಾವು: 1,58,472