One groom, Two brides : ಯುವಕನೊಬ್ಬ ತನ್ನಿಬ್ಬರು ಗೆಳತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಮದುವೆ ಆಗಿರುವ ಅಪರೂಪದ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.
ಸೂರ್ಯದೇವ್ ಎಂಬ ಯುವಕ ಗುಮ್ಮನೂರು ಮೂಲದವನು. ಲಾಲ್ದೇವಿ ಮತ್ತು ಝಲ್ಕರಿ ದೇವಿ ಹೆಸರಿನ ಇಬ್ಬರು ಗೆಳತಿಯರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಬ್ಬರನ್ನೂ ಪ್ರೀತಿಸುತ್ತಿದ್ದ ಸೂರ್ಯದೇವ್, ಯಾರಿಗೂ ಮೋಸ ಮಾಡಲು ಬಯಸಲಿಲ್ಲ. ಹೀಗಾಗಿ ಇಬ್ಬರನ್ನು ಮದುವೆಯಾಗಿದ್ದಾನೆ. ಪರಸ್ಪರ ಒಪ್ಪಿಗೆಯ ಮೇರೆಗೆ ಮೂವರು ಒಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗ್ರಾಮದ ಹಿರಿಯರು ಆರಂಭದಲ್ಲಿ ಈ ನಿರ್ಧಾರವನ್ನು ವಿರೋಧಿಸಿದರು. ಆದರೆ, ನಂತರ ಅದನ್ನು ಒಪ್ಪಿಕೊಂಡು, ಮದುವೆಗೆ ಎಲ್ಲ ರೀತಿಯಿಂದಲೂ ಸಹಕರಿಸಿದರು. ಹಿಂದು ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಆದರೆ, ಅವರಿಬ್ಬರ ಪ್ರೀತಿಯನ್ನು ನಂತರ, ಸಂಬಂಧಿಕರು ಮತ್ತು ಸ್ಥಳೀಯರು ಬೆಂಬಲಿಸಿದರು.
ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರೂ ವಧುವಿನ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿತ್ತು. ಇದು ಒಂದು ಅದ್ಧೂರಿ ಮದುವೆ ಮತ್ತು ಆಚರಣೆಯಾಗಿತ್ತು. ತಾಳಿ ಕಟ್ಟಿದ ಬಳಿಕ ಇಬ್ಬರೂ ವಧುಗಳು ವರನ ಕೈಯನ್ನು ಹಿಡಿದುಕೊಂಡು ಮಂಟಪದಲ್ಲೆ ಪ್ರದಕ್ಷಿಣೆ ಹಾಕುತ್ತಿರುವುದನ್ನು ನೋಡಬಹುದು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ಕಾಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರನ್ನೇ ಸಂಭಾಳಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ ಇಬ್ಬರನ್ನು ಕಟ್ಟಿಕೊಂಡು ಅದು ಹೇಗೆ ಸಂಸಾರ ಮಾಡುತ್ತಾರೆಂಬುದನ್ನು ಆ ದೇವರೇ ಬಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)