ಕೋಲಾರ/ಮುಳಬಾಗಿಲು: ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ಎಂಟು ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಅಂಥದೇ ಘಟನೆ ಮುಳಬಾಗಿಲು ತಾಲೂಕು ಮಿಣಜೇನಹಳ್ಳಿಯಲ್ಲಿ ಸೋಮವಾರ ಸಂಭವಿಸಿದ್ದು ಅಶುದ್ಧ ನೀರು ಕುಡಿದು ಒಬ್ಬರು ಮೃತಪಟ್ಟಿದ್ದಾರೆ. 7 ಮಂದಿ ಅಸ್ವಸ್ಥರಾಗಿದ್ದಾರೆ.
ಊರುಕುಂಟೆ ಮಿಟ್ಟೂರು ಪಂಚಾಯಿತಿ ವ್ಯಾಪ್ತಿಯ ಮಿಣಜೇನಹಳ್ಳಿಯಲ್ಲಿ ಕಲುಷಿತ ನೀರು ಸರಬರಾಜಾಗಿದ್ದು, ಇದನ್ನು ಕುಡಿದವರಲ್ಲಿ ವಾಂತಿ, ಭೇದಿ ಆಗಿ ನಿತ್ರಾಣಗೊಂಡಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಅಸ್ವಸ್ಥಗೊಂಡವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಕಲುಷಿತ ನೀರು ಕುಡಿದು ಕಳೆದೊಂದು ವಾರದಿಂದ ವಾಂತಿ-ಭೇದಿಯಿಂದ ತೀವ್ರ ಬಳಲಿದ್ದ ವೆಂಕಟರಾಮಪ್ಪ(65) ಅವರು ಸೋಮವಾರ ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ ವೆಂಕಟೇಶಪ್ಪ (55), ರಾಜಮ್ಮ(65), ರತ್ಮಮ್ಮ(೫೯), ಜಯಮ್ಮ (55) ಜಿಲ್ಲಾಸ್ಪತ್ರೆಯಲ್ಲಿ ಹಾಗೂ ವೆಂಕಟಮುನಿಯಪ್ಪ(85) ಅಮರಮ್ಮ(85), ಮುನಿಕೃಷ್ಣ (42) ಅವರು ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಭೇಟಿ
ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ಎಂ.ನಾರಾಯಣ, ಡಿಎಚ್‌ಒ ಡಾ.ಜಗದೀಶ್, ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಚಾರಿಣಿ ಸೇರಿ ಪ್ರಮುಖರು ಗ್ರಾಮಕ್ಕೆ ದೌಡಾಯಿಸಿದ್ದು, ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ಮನೆಗಳಿಗೆ ಪೂರೈಕೆಯಾಗಿರುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಚರಂಡಿಯ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿದೆ, ವಾಸನೆ ಬರುತ್ತಿದೆ. ತಿಪ್ಪೆಯೊಳಗೆ ಪೈಪ್‌ಲೈನ್ ಹಾದು ಹೋಗಿದೆ. ಪೈಪ್‌ಲೈನ್ ಅಲ್ಲಲ್ಲಿ ಒಡೆದು ಹೋಗಿದೆ. ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಪಕ್ಷಿಗಳು ಹಿಕ್ಕೆ ಹಾಕುತ್ತಿದ್ದು, ಓವರ್‌ಹೆಡ್ ಟ್ಯಾಂಕ್ ಕೂಡ ತೊಳೆಯುವುದಿಲ್ಲ, ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ, ಪಂಚಾಯಿತಿ ಅಽಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ, ಇನ್ನು ಗ್ರಾಮದ ಜಲಗಾರ ದೌರ್ಜನ್ಯ ಮಾಡುತ್ತಾನೆ ಎಂದು ಗ್ರಾಮದ ಮಹಿಳೆ ರತ್ನಮ್ಮ ಆರೋಪಿಸಿದ್ದಾರೆ.
ಸಮಸ್ಯೆ ಎದುರಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಕಸ, ಕಡ್ಡಿ ತುಂಬಿಕೊಂಡಿದೆ. ಶನಿವಾರವೇ ಹಲವರಿಗೆ ವಾಂತಿ ಭೇದಿ ಶುರುವಾಗಿ ಅವತ್ತೇ ಸಮೀಪದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.