ನ್ಯೂಸ್

ಸಂತ್ರಸ್ತೆ ನಾಪತ್ತೆ ಪ್ರಕರಣ; ರೇವಣ್ಣಗೆ ಮತ್ತೊಂದು ಸಂಕಷ್ಟ, ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

ಕೆ.ಆರ್.ನಗರ: ರಾಷ್ಟ್ರರಾಜಕಾರನದಲ್ಲಿ ಭಾರೀ ಗದ್ದಲ ಎಬ್ಬಿಸಿರುವ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ಶಾಸಕ ಎಚ್.ಡಿ. ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ಪುತ್ರ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜೆಡಿಎಸ್​ ಶಾಸಕ ಎಚ್.ಡಿ. ರೇವಣ್ಣರನ್ನು A1 ಹಾಗೂ ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು ಕೊಪ್ಪಲಿನ ನಿವಾಸಿ ಸತೀಶ್​ ಬಾಬು ಎಂಬುವವರು ಎರಡನೇ ಆರೋಪಿಯಾಗಿದ್ದು, ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ.

ದೂರಿನಲ್ಲಿ ಏನಿದೆ?

ನನ್ನ ತಾಯಿ ಆರು ವರ್ಷದಿಂದ ಹೊಳೆನರಸೀಪುರದ ಚೆನ್ನಾಂಬಿಕ ಥಿಯೇಟರ್ ಬಳಿ ಇರುವ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 3 ವರ್ಷದಿಂದ ಅಲ್ಲಿ ಕೆಲಸ ಬಿಟ್ಟಿದ್ದು, ಊರಿನಲ್ಲಿ ಕೂಲಿ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಭವಾನಿ ಅವರು ಮತ್ತೆ ಕೆಲಸಕ್ಕೆ ಕರೆದಿದ್ದಾರೆಂದು ಹೇಳಿ ಹೆಬ್ಬಾಳಕೊಪ್ಪಲಿನ ಸತೀಶ್ ಬಾಬಣ್ಣ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದರು.

ಚುನಾವಣೆಯ ದಿನ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು. ನಂತರ ಏ.29ರಂದು ರಾತ್ರಿ ಮನೆಗೆ ಬಂದ ಬಾಬಣ್ಣ ನಿಮ್ಮ ತಾಯಿ ಪೊಲೀಸರಿಗೆ ಸಿಕ್ಕರೆ ಪ್ರಕರಣ ದಾಖಲಾಗುತ್ತದೆ. ಅವರನ್ನು ರೇವಣ್ಣ ಸಾಹೇಬರು ಕರೆದುಕೊಂಡು ಹೋಗಲು ತಿಳಿಸಿದ್ದಾರೆಂದು ಹೇಳಿ ಒತ್ತಾಯದಿಂದ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಮೇ 01ರಂದು ನನ್ನ ಸ್ನೇಹಿತರು ಮನೆಗೆ ಬಂದು ನಿನ್ನ ತಾಯಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ ಎಂದು ಹೇಳಿದರು. ಕೂಡಲೇ ಣಾನು ನನ್ನ ತಾಯಿಗೆ ಕರೆ ಮಾಡಿ ಕರೆದುಕೊಂಡು ಬರುವಂತೆ ಕೇಳಿದೆ. ಆದರೆ, ಅವರು ಈ ಹಿಂದೆ ಪ್ರಜ್ವಲ್​ ರೇವಣ್ಣ  ಬೇರೆಯವರೊಂದಿಗೆ ಗಲಾಟೆ ಮಾಡಿದಾಗ ನಿಮ್ಮ ತಾಯಿಯೂ ದೊಣ್ಣೆ ಹಿಡಿದು ನಿಂತಿರುವ ಫೋಟೊ ಬಂದಿದೆ. ಹೀಗಾಗಿ ಅವರ ಮೇಲೂ ಎಫ್.ಐ.ಆರ್. ದಾಖಲಾಗಿದೆ. ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕು ಎಂದು ಹೇಳಿದರು.

ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಸುಳ್ಳು ಹೇಳಿ ತಾಯಿಯನ್ನು ಒತ್ತಾಯದಿಂದ ಕರೆದೊಯ್ದು ನಮಗೆ ಗೊತ್ತಿಲ್ಲದ ಕಡೆ ಕೂಡಿಹಾಕಿದ್ದಾರೆ.‌ ನನ್ನ ತಾಯಿಯ ಜೀವಕ್ಕೆ ತೊಂದರೆ ಇದೆ. ತಾಯಿಯನ್ನು ಕರೆದೊಯ್ಯಲು ಹೇಳಿದ ರೇವಣ್ಣ ಹಾಗೂ ಕರೆದೊಯ್ದ ಸತೀಶ್ ಬಾಬು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆಯ ಪುತ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.