ಬೆಳಗಾವಿ: ಬಾವಿಯೊಳಗೆ ಬಿದ್ದಿದ್ದ ಬೆಕ್ಕ ಅನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಅಪರೂಪದ ಘಟನೆ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜು ಹತ್ತಿರ ಶನಿವಾರ ನಡೆದಿದೆ.
ಬೋಜಗಾರ ಎಂಬುವರ ಮನೆಯ ಕಾಂಪೌಂಡ್‌ನಲ್ಲಿದ್ದ ಬಾವಿಗೆ ಮೂರು ದಿನದ ಹಿಂದೆ ಬೆಕ್ಕು ಬಿದ್ದಿತ್ತು. ಕೌಂಪೌಂಡ್ ಕೊಠಡಿಗಳಲ್ಲಿ ವಾಸವಿರುವ ಹುಡುಗರಾದ ಮಹಾಂತೇಶ ಕರಿ, ಶಿವಾನಂದ ಹುರಳಿ ಬೆಕ್ಕು ರಕ್ಷಣೆ ಮಾಡಲು ಹೋಗಿ ಬೆಕ್ಕಿನಿಂದ ಕಚ್ಚಿಸಿಕೊಂಡು ವ್ಯರ್ಥ ಪ್ರಯತ್ನ ಮಾಡಿ, ವಾಪಸ್ ಆಗಿದ್ದರು. ಬಳಿಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಆರ್‌ಎಫ್‌ಒ ಜಗದೀಶ ಅವರು, ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿರು. ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕಾಗಮಿಸಿದರು. ಮೀಚಣಕಿ, ಹಗ್ಗದ ಸಹಾಯದಿಂದ ಎರಡೂ ಇಲಾಖೆಯ ಸಿಬ್ಬಂದಿ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ, ಬೆಕ್ಕನ್ನು ಹೊರ ತೆಗೆದು ರಕ್ಷಣೆ ಮಾಡಿದರು. ಅಗ್ನಿಶಾಮಕ ದಳದ ತಾಲೂಕು ಅಧಿಕಾರಿ ರಾಜೇಂದ್ರ ಪಾಟೀಲ, ಬಸವರಾಜ ಕಾಂಬಳೆ, ಚಂದ್ರಕಾಂತ ಕವಟಗಿ, ಮಹೇಶ ನೇರ್ಲೆಕರ, ಬಸವರಾಜ ಸದಲಗೆ ಹಾಗೂ ಅರಣ್ಯ ಇಲಾಖೆಯ ಅಡಿವೆಪ್ಪ ಪಾಟೀಲ, ಬಾಬು ಇಂಚಲ ಕಾರ್ಯಾಚರಣೆ ನಡೆಸಿ, ಬೆಕ್ಕನ್ನು ರಕ್ಷಿಸಿದ್ದಾರೆ.