ಎಲ್ಲ ಅಡುಗೆಗಳ ಪೈಕಿ ಅತ್ಯಂತ ಸುಲಭವಾಗಿ ಮತ್ತು ಬೇಗ ಮಾಡಬಹುದಾದದ್ದು ಅನ್ನ. ಇದನ್ನು ತಯಾರಿಸುವ ಪ್ರಕ್ರಿಯೆ ತುಂಬ ಸುಲಭ. ಅನ್ನ ಮಾಡಲು ಪಾಕಕಲೆ ಗೊತ್ತಿರಬೇಕು ಅಂತೇನಿಲ್ಲ.
ಅಕ್ಕಿ ತೊಳೆಯೋದು, ಅದಕ್ಕೆ ನೀರು ಹಾಕಿ, ಕುಕ್ಕರ್ನಲ್ಲಿ ಜೋಡಿಸಿ, ಗ್ಯಾಸ್ ಒಲೆ ಅಥವಾ ಇಂಡಕ್ಷನ್ ಮೇಲೆ ಇಟ್ಟರಾಯಿತು. ಐದು ನಿಮಿಷಗಳಲ್ಲಿ ಅನ್ನ ರೆಡಿ! ಇನ್ನು ಸುಲಭ ವಿಧಾನ ಬೇಕು ಎಂದರೆ ಎಲೆಕ್ಟ್ರಿಕ್ ಕುಕ್ಕರ್ ಬಳಸಿದರಾಯಿತು. ಅಕ್ಕಿ ತೊಳೆದು, ನೀರು ಹಾಕಿ ಇಟ್ಟರಾಯಿತು. ಆಫ್ ಮಾಡಬೇಕು ಅಂತ ಕಾಯುವ ಅಗತ್ಯವಿಲ್ಲ. ಆಫೀಸಿನ ವೇಳೆ ಆಗಿದ್ದರೆ ಹೊರಟು ಬಿಡಬಹುದು. ಬಿಸಿ ಆಗಿಡುವ, ಸ್ವಯಂಚಾಲಿತ ನಿಲ್ಲಿಸುವ ವ್ಯವಸ್ಥೆ ಈ ಕುಕ್ಕರ್ಗಳಿಗೆ ಇರುವುದರಿಂದ ಸಂಜೆ ವಾಪಸ್ ಮನೆಗೆ ಬಂದಾಗ ಊಟಕ್ಕೆ ಬಿಸಿಅನ್ನ ಸಿದ್ಧವಾಗಿರುತ್ತೆ.
ನಮ್ಮ ಅಜ್ಜಿ-ಮುತ್ತಜ್ಜಿಯಂದಿರ ಕಾಲದಲ್ಲಿ ಅಡುಗೆ ಮಾಡುವುದು ಎಷ್ಟೊಂದು ಕಷ್ಟದ ಕೆಲಸವಾಗಿತ್ತು? ಅಡುಗೆಗಾಗಿ ದೂರದ ಬಾವಿಯಿಂದ ನೀರು ತರುವುದು, ಕಟ್ಟಿಗೆ ಸಂಗ್ರಹಿಸಿ ತರುವುದು, ಒಲೆ ಉರಿಸುವುದು, ಅಡುಗೆಗೆ ಪೂರ್ವತಯಾರಿಯಾಗಿ ಭತ್ತ ಕುಟ್ಟುವುದು, ಅಕ್ಕಿ ಆರಿಸುವುದು, ಹೊಟ್ಟು ತೆಗೆಯುವುದು, ನುಚ್ಚನ್ನು ಬೇರ್ಪಡಿಸುವುದು ಇಷ್ಟೆಲ್ಲ ಕೆಲಸಗಳಾದ ಮೇಲೆ ಅಕ್ಕಿಯನ್ನು ತೊಳೆದು ಪಾತ್ರೆಯಲ್ಲಿ ಅಕ್ಕಿ, ನೀರು ಹಾಕಿ ಒಲೆ ಮೇಲೆ ಇಡುವುದು, ಅದು ಉಕ್ಕಿ ಹೋಗದಂತೆ ಒಲೆ ಎದುರಿಗೇ ಕೂತು ಕೊನೆಗೆ ಗಂಜಿ ಬಸಿದು, ಅನ್ನ ತಯಾರಿಸುವುದು... ಎಷ್ಟೆಲ್ಲ ಶ್ರಮ ಪಡಬೇಕಾಗುತ್ತಿತ್ತು. ಮನೆಯಲ್ಲಿ ಹಿರಿಯರು ಅಡುಗೆ ಮಾಡುತ್ತಿದ್ದ ವಿಧಾನವನ್ನು ಗಮನಿಸಿದ್ದವರಿಗೆ ಈ ಸಂಗತಿಗಳು ಪರಿಚಿತ. ಈಗೆಲ್ಲ ಗ್ಯಾಸ್ ಒಲೆ, ಎಲೆಕ್ಟ್ರಿಕ್ ಒಲೆ ಇರುವುದರಿಂದ ಅನ್ನ ಮಾಡುವುದು ಕಷ್ಟವೇನಲ್ಲ.
ನೀರಿಲ್ಲದೆ ಅನ್ನ ಮಾಡಲು ಸಾಧ್ಯವಿಲ್ಲ!: ಅಕ್ಕಿಯಲ್ಲಿರುವ ವೈವಿಧ್ಯಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಮಾರುಕಟ್ಟೆಗೆ ಅಕ್ಕಿ ತರಲೆಂದು ಹೋದರೆ ಎಷ್ಟೊಂದು ಪ್ರಕಾರಗಳು? ಬಾಯಿಲ್ಡ್ ಅಕ್ಕಿ, ಸೆಮಿ ಬಾಯಿಲ್ಡ್ ಅಕ್ಕಿ, ಸೋನಾಮಸೂರಿ, ಬಾಸುಮತಿ, ಕೆಂಪಕ್ಕಿ, ಪಾಲಿಶ್ ಮಾಡಿದ ಅಕ್ಕಿ, ಪಾಲಿಶ್ ಮಾಡದ ಅಕ್ಕಿ... ಸಾಮಾನ್ಯವಾಗಿ ನಗರಪ್ರದೇಶದ ಅಂಗಡಿಗಳಿಗೆ ಹೋದರೆ 20-25 ಪ್ರಕಾರದ ಅಕ್ಕಿಯನ್ನು ಕಾಣಬಹುದು. ಆದರೆ, ಭಾರತದಲ್ಲಿ 6 ಸಾವಿರಕ್ಕಿಂತ ಅಧಿಕ ಬಗೆಯ ಅಕ್ಕಿ ಪ್ರಕಾರಗಳು ಇವೆಯಂತೆ. ಬಾಸುಮತಿ ಅಕ್ಕಿಯಲ್ಲೇ 30 ಪ್ರಕಾರದ ವೈವಿಧ್ಯಗಳಿವೆ. ಭಾರತೀಯರಿಗಂತೂ ಸಾವಿರಾರು ವರ್ಷಗಳಿಂದ ಅಕ್ಕಿ ಎನ್ನುವುದು ಆಹಾರ ಸಂಸ್ಕೃತಿಯ ದೊಡ್ಡ ಭಾಗ. ಭತ್ತದ ವಿಶೇಷ ತಳಿಗಳನ್ನು ತಲೆತಲಾಂತರಗಳಿಂದಲೂ ಬೆಳೆಯುತ್ತ ಬಂದಿದ್ದೇವೆ. ಭತ್ತ ಬೆಳೆಯುವ ವಿಧಾನ ಕಷ್ಟಕರವಾಗಿದ್ದರೂ, ಅನ್ನ ಸುಲಭವಾಗಿ ತಯಾರಿಸಬಹುದಾಗಿರುವುದರಿಂದ, ಊಟದ ಅವಿಭಾಜ್ಯ ಅಂಗವಾಗಿದೆ.
ಅದಮ್ಯ ಚೇತನದ ಬೆಂಗಳೂರು ಅಡುಗೆಮನೆಯಲ್ಲಿ ದಿನಕ್ಕೆ 4 ಟನ್ ಅಕ್ಕಿ ಬಳಸುತ್ತೇವೆ. ಈ ಅಕ್ಕಿ ತೊಳೆಯಲು 8 ಸಾವಿರ ಲೀಟರ್ ನೀರು ಬೇಕು. ಈ ನೀರನ್ನು ಟ್ಯಾಂಕರ್ಗಳಿಗೆ ಹಾಕಿಕೊಂಡು, ಗಿಡಗಳಿಗೆ ಉಣಿಸುತ್ತೇವೆ. ಸ್ಟೀಮ್ಲ್ಲಿ ಅನ್ನ ತಯಾರಿಸಿ, ಗಂಜಿಯನ್ನು ಚೆಲ್ಲದೆ ಸಾಂಬಾರ್ಗೆ ಹಾಕುವ ಮೂಲಕ ಸಾಂಬಾರಿನ ರುಚಿಯ ಜತೆ ಪೌಷ್ಟಿಕಾಂಶವನ್ನೂ ಬೆಳೆಸುತ್ತಿದ್ದೇವೆ. ಹೀಗೆ ಕಳೆದ 18 ವರ್ಷಗಳಲ್ಲಿ ಅನ್ನ ಮಾಡುವ ರೀತಿಯಲ್ಲಿ, ಇಂಧನ ಬಳಕೆಯಲ್ಲಿ ಹಲವು ಬದಲಾವಣೆ ಮಾಡಿಕೊಂಡು, ವೇಗವಾಗಿ, ಸುಲಭವಾಗಿ ತಯಾರಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ.
ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ: ಅನ್ನವನ್ನು ಸುಲಭ ವಿಧಾನದಲ್ಲಿ ಮತ್ತು ವೇಗವಾಗಿ ಮಾಡುವ ಹೊಸ ಪ್ರಕ್ರಿಯೆಗಳನ್ನು ತಿಳಿದುಕೊಂಡಿದ್ದೇವೆಯೇನೋ ನಿಜ. ಆದರೆ, ನಾವು ಪ್ರಕೃತಿಯಿಂದ ಬಹಳ ದೂರ ಸಾಗುತ್ತಿದ್ದೇವೆ. ಅನ್ನ ತಯಾರಿಕೆಗೆ ಬೇಕಾಗುವ ನೀರು, ಇಂಧನ, ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಇದರಿಂದ ಮಣ್ಣು ಮತ್ತು ನೀರಿನ ಮೇಲೆ ಆಗಿರುವ ಪರಿಣಾಮ, ಅನ್ನವನ್ನು ಹೆಚ್ಚು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ- ಇದೆಲ್ಲದರ ಬಗ್ಗೆ ನಿಧಾನವಾಗಿಯಾದರೂ ಸರಿ, ವಿಷಯದ ಗಂಭೀರತೆ ನಮ್ಮ ಗಮನಕ್ಕೆ ಬರುತ್ತಿರುವುದು ಸಮಾಧಾನಕರ ಸಂಗತಿ.
ಒಂದು ಕೆಜಿ ಅಕ್ಕಿ ತಯಾರಿಕೆಗೆ ಎಷ್ಟು ನೀರು ಬೇಕು?: ಒಂದು ಕೆಜಿ ಅಕ್ಕಿಯಿಂದ ಅನ್ನ ತಯಾರಿಸಲು ಎಷ್ಟು ನೀರು ಬೇಕು? ಇದೇನು ಪ್ರಶ್ನೆ ಎಂದು ಉದಾಸೀನ ಮಾಡಬೇಡಿ. ನಮಗೆಲ್ಲ ಗೊತ್ತಿರುವಂತೆ ಒಂದು ಕೆಜಿ ಅಕ್ಕಿ ಅನ್ನ ಆಗಬೇಕಾದರೆ ಎರಡು ಲೀಟರ್ ಬೇಕು. ಆದರೆ, ಒಂದು ಕೆಜಿ ಅಕ್ಕಿ ಬೆಳೆಯಲು ಎಷ್ಟು ನೀರು ಬೇಕು? ಈ ಪ್ರಶ್ನೆಯನ್ನು ಬಹುಶಃ ನಮ್ಮನ್ನು ನಾವು ಎಂದೂ ಕೇಳಿಕೊಂಡಿಲ್ಲ ಅಲ್ಲವೇ? ಈ ಅಂಕಿಸಂಖ್ಯೆ ಕೇಳಿದರೆ ಅಚ್ಚರಿಗೊಳ್ಳುತ್ತೀರಿ. ಒಂದು ಕೆಜಿ ಅಕ್ಕಿ ಬೆಳೆಯಲು ಸರಾಸರಿ 2,500 ಲೀಟರ್ ನೀರು ಬೇಕು. 3 ಸಾವಿರ, 5 ಸಾವಿರ ಲೀಟರ್ ನೀರು ಬೇಕಾಗುವ ಅಕ್ಕಿಯ ಪ್ರಕಾರಗಳೂ ಇವೆ. ಸಾಮಾನ್ಯವಾಗಿ ನೋಡಿದಾಗ, ಸರಾಸರಿ ಒಂದು ಕೆಜಿ ಅಕ್ಕಿ ತಯಾರಿಸಲು 2,500 ಲೀಟರ್ ನೀರು ಅಗತ್ಯ. ಇನ್ನು, ಹೊರರಾಜ್ಯಗಳಿಂದಲೋ, ದೂರದ ಪ್ರದೇಶಗಳಿಂದಲೂ ಅಕ್ಕಿ ತರಿಸಿಕೊಂಡರೆ ಅದರ ಇಂಧನ ಖರ್ಚು ಬೇರೆ. 1 ಕೆಜಿ ಅಕ್ಕಿ ತೊಳೆಯಲು 2-3 ಲೀಟರ್ ನೀರು. ಅನ್ನ ಆಗಲು 2 ಲೀಟರ್. ಅಂದರೆ, ಒಂದು ಕೆಜಿ ಅಕ್ಕಿ ತಯಾರಾಗಿ, ಅದು ಅನ್ನ ಆಗುವವರೆಗೆ 2,505 ಲೀಟರ್ ನೀರು ಬೇಕು!
ಒಬ್ಬ ವ್ಯಕ್ತಿ 100 ಗ್ರಾಂ ಅಕ್ಕಿಯಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದೊಂದು ಲೆಕ್ಕಾಚಾರ. ಅಂದರೆ 100 ಗ್ರಾಂ ಅಕ್ಕಿಗೆ 250 ಲೀಟರ್ ನೀರು! ಒಂದು ತುತ್ತು ಅನ್ನ 10 ಗ್ರಾಂ ಎಂದು ಪರಿಗಣಿಸಿದರೆ ಒಂದು ತುತ್ತಿಗೆ 25 ಲೀಟರ್ ನೀರು ಖರ್ಚಾಗುತ್ತದೆ! ಅದರರ್ಥ, ಒಂದು ತುತ್ತು ಅನ್ನ ಚೆಲ್ಲಿದರೆ, ಎರಡು ಬಕೆಟ್ನಷ್ಟು ನೀರು ಚೆಲ್ಲಿದಂತೆ!
ಆಹಾರಮೈಲು: ಅನ್ನ ತಯಾರಿಕೆಗೆ ಎಷ್ಟು ಇಂಧನ ಬೇಕು? 10-15 ನಿಮಿಷದಲ್ಲಿ ಖರ್ಚಾಗುವ ಎಲ್ಪಿಜಿ ಗ್ಯಾಸ್ ಅಥವಾ ವಿದ್ಯುತ್ನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಆದರೆ, ನಾವು ಬಳಸುವ ಅಕ್ಕಿ ಎಲ್ಲಿಂದ ಬರುತ್ತಿದೆ ಎಂದು ಯೋಚಿಸಿದ್ದೇವೆಯಾ? ಹೆಚ್ಚು ಭತ್ತ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ, ನಾವು ಉಪಯೋಗಿಸುವ ಅಕ್ಕಿ ದೂರದ ರಾಜ್ಯಗಳಿಂದಲೂ ಬರುತ್ತಿದೆ. ಉತ್ತರದ ರಾಜ್ಯಗಳಿಂದಲೋ, ಈಶಾನ್ಯದ ರಾಜ್ಯಗಳಿಂದಲೋ ಟ್ರಕ್ ಅಥವಾ ಇತರ ಸರಕು ಸಾಗಣೆ ವಾಹನದಲ್ಲಿ ಅಕ್ಕಿ ನಮ್ಮ ಊರು ತಲುಪಬೇಕಾದರೆ ಖರ್ಚಾಗುವ ಇಂಧನ, ಅದರಿಂದ ಉಂಟಾಗುವ ವಾಯುಮಾಲಿನ್ಯ ಲೆಕ್ಕ ಹಾಕಿದ್ದೇವೆಯೆ? ಇದರಿಂದ ಪರಿಸರದ ಮೇಲಾಗುತ್ತಿರುವ ಇಂಗಾಲದ ಹೆಜ್ಜೆಗುರುತುಗಳೇನು (ಇಚ್ಟಚಿಟ್ಞ ್ಛಟಠಿಟ್ಟಜ್ಞಿಠಿ) ಎಂದು ಲೆಕ್ಕಾಚಾರ ಹಾಕುವ ‘ಆಹಾರಮೈಲು’ (ಟಟಛ ಞಜ್ಝಿಛಿ) ವಿಷಯವನ್ನು ತಜ್ಞರು ಜನರ ಮುಂದಿಟ್ಟರು. ಇತ್ತೀಚಿನ ದಿನಗಳಲ್ಲಿ ‘ಆಹಾರಮೈಲು’ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿಲ್ಲವಾದರೂ, ನಾವೆಲ್ಲ ಈ ಬಗ್ಗೆ ಚಿಂತನೆ ಮಾಡಬೇಕಿದೆ.
ಸಾವಿರಾರು ಅಥವಾ ನೂರಾರು ಮೈಲಿ ದೂರದಿಂದ ನಮಗೆ ಬರುವ ಅಕ್ಕಿಯನ್ನು ಇಲ್ಲಿ ತರಲು ಎಷ್ಟು ಪೆಟ್ರೋಲ್, ಡೀಸೆಲ್ ಖರ್ಚಾಗಿದೆ? ಈ ವಾಹನಗಳಿಂದ ಉಂಟಾಗಿರುವ ಮಾಲಿನ್ಯದ ಪ್ರಮಾಣ ಎಷ್ಟು? ಎಂಬ ಬಗ್ಗೆಯೂ ಯೋಚಿಸಬೇಕಲ್ಲವೇ? ಭತ್ತ ಬೆಳೆಯಲು, ಅದರ ಮೇಲಿನ ಹೊಟ್ಟನ್ನು ತೆಗೆಯಲು, ಅಕ್ಕಿ ಆರಿಸಲು, ಪಾಲಿಶ್ ಮಾಡಲು ಬಳಸುವ ಯಂತ್ರಗಳಿಗೆ ಉಪಯೋಗಿಸುವ ಇಂಧನ ಮತ್ತು ಆ ಇಂಧನ ದಹಿಸುವಿಕೆಯಿಂದ ಉಂಟಾಗುವ ಮಾಲಿನ್ಯದ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಸಗೊಬ್ಬರ ಮತ್ತು ಕೀಟನಾಶಕಗಳ ತಯಾರಿಕೆಗೆ ಹಾಗೂ ಸಾಗಾಣಿಕೆಗೆ ಬೇಕಾದ ಇಂಧನ, ಉಂಟಾಗುವ ಪರಿಸರ ಮಾಲಿನ್ಯ ಗಮನಿಸಲೇ ಬೇಕು.
ಅನ್ನವನು ಇಕ್ಕುವದು/ ನನ್ನಿಯನು ನುಡಿಯುವುದು/ ತನ್ನಂತೆ ಪರರ ಬಗೆದೊಡೆ/ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಎಂದು ನಂಬಿ ಬಾಳಿದವರು ಅನಂತ್ಕುಮಾರ್
ಅನ್ನಪೂರ್ಣ- ಮಧ್ಯಾಹ್ನದ ಬಿಸಿಯೂಟ ಅದಮ್ಯ ಚೇತನದ ಮಹತ್ವದ ಯೋಜನೆ. ನಮ್ಮ ಪ್ರಧಾನ ಪೋಷಕರಾಗಿದ್ದ ಅನಂತಕುಮಾರ್ ಪ್ರತಿಯೊಬ್ಬರ ಊಟದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅಲ್ಲದೆ, ‘ಹಸಿರು ಜೀವನಶೈಲಿ’ಗೆ ವಿಶೇಷ ಆದ್ಯತೆ ನೀಡಿ, ಇದರ ಮಹತ್ವದ ಬಗ್ಗೆ ಅವರು ಮಾತನಾಡುತ್ತಿದ್ದರು. ಆಹಾರ, ಬಟ್ಟೆ, ಮನೆ, (ರೋಟಿ, ಕಪ್ಡಾ, ಮಕಾನ್) ಪ್ರಕೃತಿಗೆ ಪೂರಕವಾಗಿ ಇರಬೇಕು ಎಂದು ಪ್ರತಿಪಾದಿಸುತ್ತಿದ್ದರು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಗಾಗ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೆವು. ‘ಪರಿಸರಪೂರಕ ಜೀವನಶೈಲಿ ಮತ್ತು ಅದರ ಹಿಂದಿರುವ ವಿಜ್ಞಾನ’ ಎಂಬ ವಿಷಯದ ಬಗ್ಗೆ ಹಿಂದೊಮ್ಮೆ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದೆವು. ಇದರಲ್ಲಿ 150 ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.
ಅದಮ್ಯ ಚೇತನದಲ್ಲಿ ಉಪಾಹಾರ, ಊಟಕ್ಕೆ ಮರುಬಳಸಬಹುದಾದ ಸ್ಟೀಲ್ ತಟ್ಟೆ, ಚಮಚಗಳನ್ನೇ ಬಳಸುತ್ತೇವೆ. ತಿಂಡಿ ಅಥವಾ ಊಟವಾದ ಬಳಿಕ ತಟ್ಟೆಯಲ್ಲಿ ಉಳಿದ ಅನ್ನವನ್ನು ಒಂದು ಬಕೆಟ್ನಲ್ಲಿ ಹಾಕುವ, ಚಮಚವನ್ನು ಬುಟ್ಟಿಯಲ್ಲಿ ಹಾಕಿ, ತಟ್ಟೆಯನ್ನು ನಿಗದಿತ ಸ್ಥಳದಲ್ಲಿ ಇರಿಸುವ ಕ್ರಮ ಅನುಸರಿಸಲಾಗುತ್ತದೆ. ಇದರಿಂದ ನೂರಾರು ಜನ ಒಟ್ಟಿಗೆ ಊಟ ಮಾಡಿದರೂ, ತಟ್ಟೆ, ಲೋಟಗಳನ್ನು ಸುಲಭವಾಗಿ ಸ್ವಚ್ಛ ಮಾಡಿ, ಮರುಬಳಕೆ ಮಾಡಲು ಅನುಕೂಲವಾಗುತ್ತದೆ. ಕಾರ್ಯಾಗಾರದ ಮೊದಲ ದಿನ 150 ಮಕ್ಕಳ ತಿಂಡಿ ಆದ ಬಳಿಕ 40 ಕೆಜಿ ಆಹಾರತ್ಯಾಜ್ಯ ಸಂಗ್ರಹ ಆಗಿತ್ತು. ಅದನ್ನು ಫಲಕದ ಮೇಲೆ ನಮೂದಿಸಿದ್ದೆವು. ಮಧ್ಯಾಹ್ನದ ಊಟದ ಬಳಿಕ 30 ಕೆಜಿ ಆಹಾರ ತ್ಯಾಜ್ಯ. ಮಾರನೇ ದಿನ ಉಪಾಹಾರದ ನಂತರ ಸಂಗ್ರಹವಾದ ತ್ಯಾಜ್ಯ 15 ಕೆಜಿಗೆ ಇಳಿದಿತ್ತು. ಇದಕ್ಕೆ ಒಂದು ಕಾರಣವೂ ಇದೆ. ತಿಂಡಿ/ಊಟ ಮಾಡಿದವರೇ ಅವರ ತಟ್ಟೆಯಿಂದ ಉಳಿಕೆಯನ್ನು ಚೆಲ್ಲಬೇಕಾದರೆ ‘ಇಷ್ಟೊಂದು ಅನ್ನ ವ್ಯರ್ಥ ಮಾಡಿದೇವಲ್ಲ’ ಎಂಬ ಪಾಪಪ್ರಜ್ಞೆ ಕಾಡಲು ಶುರುವಾಗುತ್ತದೆ. ಹಾಗಾಗಿ, ಬಹುತೇಕರು ಹಿಂದಿನ ದಿನದ ತಪ್ಪನ್ನು ಸುಧಾರಿಸಿಕೊಳ್ಳಲು ಯತ್ನಿಸುತ್ತಾರೆ.
ಎರಡನೇ ದಿನ ಎರಡು ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು. ಹರೀಶ್ ಭಟ್ ಅವರು ಆಹಾರಮೈಲಿನ ಬಗ್ಗೆ, ಆಹಾರಕ್ಕೆ ಬೇಕಾಗುವ ನೀರಿನ ಬಗ್ಗೆ ಮಾತನಾಡಿದರು. ಕಸರಹಿತ ಮತ್ತು ಪಳೆಯುಳಿಕೆ ರಹಿತ ಇಂಧನದ ಹಸಿರು ಅಡುಗೆಮನೆ ಬಗ್ಗೆ ನಾನು ಮಾತನಾಡಿದೆ. ಈ ಎರಡು ಉಪನ್ಯಾಸ ಮುಗಿದ ಬಳಿಕ ಊಟದ ಹೊತ್ತು. ಊಟದ ಬಳಿಕ ಬಕೆಟ್ನ್ನು ಗಮನಿಸಿದಾಗ ಅಚ್ಚರಿ ಕಾದಿತ್ತು. ಕಸದಬುಟ್ಟಿಯಲ್ಲಿ ಒಂದು ಅನ್ನದ ಅಗುಳು ಕೂಡ ಇರಲಿಲ್ಲ. ಈ ಖಾಲಿ ಬಕೆಟ್ ಸಾಕಷ್ಟು ಪಾಠಗಳನ್ನು ಕಲಿಸಿತು. ಮಕ್ಕಳಿಗೆ ಶಾಲೆಯಲ್ಲಿ, ಮನೆಯಲ್ಲಿ ಇಂಥ ವಿಷಯಗಳನ್ನು ಹೇಳಿಕೊಟ್ಟಿಲ್ಲ. ಆದರೆ, ಹರೀಶ್ ಭಟ್ಟರು ಒಂದು ಗಂಟೆಯ ಉಪನ್ಯಾಸದಲ್ಲಿ ಆಹಾರ ಪೋಲಾಗಬಾರದು, ನೆನಪಿರಲಿ ಒಂದು ತುತ್ತು ಅನ್ನ ಚೆಲ್ಲಿದರೆ ಎರಡು ಬಕೆಟ್ ನೀರು ಚೆಲ್ಲಿದಂತೆ ಎಂಬುದನ್ನು ಮನದಟ್ಟು ಮಾಡಿಸಿದ್ದರು. ಇದು ಒಂದು ದಿನದ ಬದಲಾವಣೆ ಆಗಿರಲಿಲ್ಲ. ಅವರು ಮನೆಗೆ ಹೋಗಿ ಅವರ ತಂದೆ-ತಾಯಿಗೂ ಒಂದು ತುತ್ತು ಅನ್ನದ ಮಹತ್ವವನ್ನು ತಿಳಿಸಿಕೊಟ್ಟರು. ನಾವೆಲ್ಲ ಆ ಮಹತ್ವವನ್ನು ತಿಳಿದುಕೊಂಡು, ಪರಿಸರಪೂರಕ ಜೀವನಶೈಲಿ ಅಳವಡಿಸಿಕೊಳ್ಳುವುದು ಈಗಿನ ಅಗತ್ಯ.
(ಲೇಖಕರು ಅದ್ಯಮ ಚೇತನ ಮುಖ್ಯಸ್ಥರು)