ಶಿವಮೊಗ್ಗ: ಪತ್ರಕರ್ತರ ಮೇಲಿನ ವಿಶ್ವಾಸಾರ್ಹತೆ ಕಡಿಮೆ ಆಗುತ್ತಿದೆ. ಪತ್ರಿಕೆ ಅಥವಾ ಪತ್ರಕರ್ತರು ಒಮ್ಮೆ ವಿಶ್ವಾಸಾರ್ಹತೆ ಕಳೆದುಕೊಂಡರೆ ಕರಪತ್ರ ಅಥವಾ ರದ್ದಿಗೆ ಸಮ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಕಳವಳ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಸಾಧಕ ಪತ್ರಕರ್ತರಿಗೆ ಸನ್ಮಾನ ಸಮಾರಂಭದ ದಿಕ್ಸೂಚಿ ಭಾಷಣ ಮಾಡಿದರು.
ಮಾಧ್ಯಮ ರಂಗ ಎಂಬುದು ಸಂವಿಧಾನದ ನಾಲ್ಕನೇ ಅಂಗವಾಗಿ ಉಳಿದಿಲ್ಲ. ಮಾಧ್ಯಮಗಳ ಮೇಲೆ ಜನರ ನಂಬಿಕೆ ನಾಶ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ, ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಉಪಸ್ಥಿತರಿದ್ದರು.
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಆದ್ಯತೆ
ಕೆಯುಡಬ್ಲುೃಜೆ ಸಂಘವು ತಮ್ಮದೆಯಾದ ಅಸ್ತಿತ್ವ ಕಾಯ್ದುಕೊಂಡು ಬಂದಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಚಿಕ್ಕದಾಗಿ ಶುರುವಾದ ಆಪತ್ಬಾಂದವ ಯೋಜನೆ ಇಂದು ಪ್ರತಿ ತಿಂಗಳು 50 ಸಾವಿರ ರೂ. ಸಂಗ್ರಹವಾಗುತ್ತಿದೆ. ಅದರ ಮೂಲಕ ಇದುವರೆಗೆ 25 ಲಕ್ಷ ರೂ. ಸಹಾಯ ಮಾಡಲಾಗಿದೆ. ಸಂಘದಲ್ಲಿ ಒಂದು ಕೋಟಿ ರೂ. ಇದ್ದು ಅದರ ಬಡ್ಡಿ ಹಣದಲ್ಲಿ ಪತ್ರಕರ್ತರ ಕುಟುಂಬಗಳಿಗೆ ಜಿಲ್ಲಾ ಸಂಘಗಳ ಶಿಫಾರಸ್ಸಿನ ಮೇಲೆ ಧನ ಸಹಾಯ ಮಾಡಲಾಗುತ್ತಿದೆ ಎಂದರು.