ನ್ಯೂಸ್

ದುರ್ಗದ ವೀರವನಿತೆ ಒನಕೆ ಓಬವ್ವ; ಇಂದು ಜಯಂತಿ..

| ಡಾ.ಬಿ.ಎಲ್.ವೇಣು

ಗಂಡು ಮೆಟ್ಟಿದ ನಾಡು ಐತಿಹಾಸಿಕ ಚಿತ್ರದುರ್ಗದಲ್ಲಿ ಗಂಗರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಶಾತವಾಹನರು, ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದರಾದರೂ ತದನಂತರ ಪಾಳೇಗಾರರು ಆಳ್ವಿಕೆ ನಡೆಸಿದರು. ಅಂದಾಜು 13 ಮಂದಿ ಪಾಳೇಗಾರರು 211 ವರ್ಷಗಳ ಕಾಲ ದುರ್ಗವನ್ನು ಆಳಿದ್ದಾರೆ. ಇವರಲ್ಲಿ ಕೊನೆಯ ದೊರೆ ರಾಜಾ ಗಂಡುಗಲಿ ಮದಕರಿನಾಯಕ ಕ್ರಿ.ಶ.1754 ರಿಂದ 1779 ರವರೆಗೆ ಆಳ್ವಿಕೆ ನಡೆಸಿದನು.

ಈ ಕಾಲಮಾನದಲ್ಲಿ ಹೈದರಾಲಿ, ನವಾಬನೊಡನೆ ನಡೆದ ಯುದ್ಧಪ್ರಸಂಗದಲ್ಲಿ ಒಂದು ದಿನದ ಜಯಕ್ಕೆ ಆಕಸ್ಮಿಕವಾಗಿ ಕಾರಣಳಾಗಿ ದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವಗೂ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಆಕೆಯ ಧೀರೋದಾತ್ತ ನಿಲುವನ್ನು ಶ್ಲಾಘಿಸಲಾಗಿದೆ. ಬಹುಮುಖ್ಯವಾಗಿ ಸ್ವಾಮಿನಿಷ್ಠೆ, ಸಮಯಪ್ರಜ್ಞೆ, ಸ್ಪೂರ್ತಿ, ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ದಾಖಲಿಸಲಾಗಿದೆ.

ಓಬವ್ವಳ ತವರೂರು ಗುಡೆಕೋಟೆ. ಕೋಟೆ ಕಾವಲಿನ ಕಹಳೆ ಮದ್ದ ಹನುಮಪ್ಪನ ಮಡದಿಯಾಗಿ ದುರ್ಗದ ಸೊಸೆಯಾದವಳು. ಈಗಿನ ಒನಕೆ ಕಿಂಡಿ ಬಳಿ ಆಕೆಯ ಮನೆಯಿತ್ತೆಂದು ಇತಿಹಾಸಕಾರರು ಗುರುತಿಸುತ್ತಾರೆ. ಹೈದರಾಲಿಖಾನನು ದುರ್ಗವನ್ನು ವಶಪಡಿಸಿಕೊಳ್ಳಲು ಸದಾ ತವಕಿಸುತ್ತಿದ್ದ. ಕ್ರಿ.ಶ. 1762, 1774, 1777 ಹೀಗೆ ಮೂರು ಬಾರಿ ದಂಡೆತ್ತಿ ಬಂದರೂ ವಶಪಡಿಸಿಕೊಳ್ಳಲಾಗದೆ ಹಿಂದಿರುಗಿದ್ದ. ಕ್ರಿ.ಶ. 1779ರಲ್ಲಿ ದಾಳಿ ನಡೆಸಲು ಮುಂದಾದಾಗ ನೇರವಾಗಿ ಯುದ್ಧಗೈಯುವುದರಿಂದ ಗೆಲುವು ಅನಿಶ್ಚಿತವೆಂದು ಯೋಚಿಸಿ ಕುಟಿಲೋಪಾಯದಿಂದ ಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿ ಗೂಢಚಾರರನ್ನು ನೇಮಿಸಿದ್ದ.

ಹೈದರಾಲಿಯು ಸೇನೆ ಕಳ್ಳಗಿಂಡಿ ಮೂಲಕ ಒಳಪ್ರವೇಶಿಸಿ ಕೋಟೆಯ ದ್ವಾರಗಳನ್ನು ತೆರೆದರೆ ಸುಲಭವಾಗಿ ದಾಳಿ ಮಾಡಬಹುದೆಂದು ಸಂಚು ರೂಪಿಸಿಯೇ ಕಳುಹಿಸಿದ. ಒಬ್ಬರು ಮಾತ್ರವೇ ನುಸುಳಬಹುದಾದ ಕಳ್ಳಗಿಂಡಿಯ ಬಳಿಯೇ ಓಬವ್ವಳ ಗೃಹ. ಮಧ್ಯಾಹ್ನದ ವೇಳೆ ಮದ್ದಹನುಮಪ್ಪ ಕೋಟೆ ಕಾವಲಲ್ಲಿ ನಿರತನಾಗಿದ್ದ. ಅದೂ ದೂರದಲ್ಲಿರುವ ಕಹಳೆಬತೇರಿಯ ಮೇಲೆಂದರಿತು ಒಳನುಸುಳಲು ಸನ್ನದ್ಧವಾಗುತ್ತದೆ ಶತ್ರುಪಡೆ. ಮನೆಯಲ್ಲಿ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗೆ ಕಾಯುತ್ತಿದ್ದ ಓಬವ್ವ, ಗಂಡ ಬರುವುದು ತಡವಾದ್ದರಿಂದ ಏನು ತುರ್ತು ಇದೆಯೋ ಎಂದು ಭಾವಿಸಿ, ಮಗುವನ್ನು ಮಲಗಿಸಿ ನೆರೆಮನೆಯಿಂದ ಕಾಳುಕುಟ್ಟಲು ತಂದ ಒನಕೆಯನ್ನು ಕೊಟ್ಟು ಬರಲು ಹೊರಟಳು. ಕಳ್ಳಗಿಂಡಿಯಲ್ಲಿ ಅಸ್ಪಷ್ಟ ಮಾತುಗಳು ಕೇಳಬರುತ್ತಿದ್ದದ್ದಲ್ಲದೆ, ಕತ್ತಿ ಗುರಾಣಿಗಳ ಶಬ್ದವನ್ನೂ ಆಲಿಸಿದ ಓಬವ್ವ ಜಾಗೃತಳಾದಳು.

ಕಳ್ಳಗಿಂಡಿಯತ್ತ ಬಾಗಿ ನೋಡಿದಾಗ ಒಬ್ಬ ನುಸುಳುತ್ತಿರುವುದು ಗೋಚರವಾಯಿತು. ಅವನ ಹಿಂದೆ ಹಲವರು ಇರುವುದು ಕಂಡಾಗ ಇದು ಶತ್ರುಗಳ ಹುನ್ನಾರವೆಂದು ಯೋಚಿಸಿ ಸ್ವಲ್ಪ ಸಮಯವನ್ನೂ ವ್ಯರ್ಥ ಮಾಡದೆ ಸೀರೆಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ವೀರಗಚ್ಚೆ ಹಾಕಿ ತನ್ನ ಕೈಯಲ್ಲಿದ್ದ ಒನಕೆಯಿಂದಲೇ ಶತ್ರುಗಳ ತಲೆಯೊಡೆಯಲು ನಿಂತು ಬಿಟ್ಟಳು. ಕಿಂಡಿಯಲ್ಲಿ ಒಬ್ಬೊಬ್ಬರಾಗಿ ತೂರಿ ಬಂದಂತೆಯೇ ಮನದಲ್ಲಿ ತಾಯಿ ಏಕನಾಥಿ, ಉಚ್ಚಂಗಿ ದೇವಿಯನ್ನು ನೆನೆದು ಮೈ ಕಸುವನ್ನೆಲ್ಲ ಒಟ್ಟುಗೂಡಿಸಿ ತೋಳುಗಳಿಗೆ ತುಂಬಿ ಒಳನುಗ್ಗುವವರ ತಲೆಯನ್ನು ಒನಕೆಯಿಂದ ಬಾರಿಸಿ ಛಿದ್ರ ಛಿದ್ರ ಮಾಡಿದವಳೇ ಅವರನ್ನು ಎಳೆದು ಪಕ್ಕಕ್ಕೆ ಬಿಸಾಡಿ, ಒಳನುಸುಳುವವನಿಗೆ ದಾರಿ ಮಾಡಿಕೊಡುತ್ತ ರಣಚಂಡಿಯಂತೆ ಶತ್ರುಸಂಹಾರಕ್ಕೆ ನಿಂತು ನೂರಾರು ಶತ್ರುಗಳ ತಲೆ ಒಡೆದಳು. ಇದೇ ಸಮಯಕ್ಕೆ ಊಟಕ್ಕೆ ಆಗಮಿಸಿದ ಮದ್ದ ಹನುಮಪ್ಪ ರಾಶಿ-ರಾಶಿ ಹೆಣಗಳನ್ನು, ಒನಕೆ ಹಿಡಿದು ರಕ್ತಸಿಕ್ತಳಾದ ಹೆಂಡತಿಯನ್ನು ಕಂಡು ಎರಗಿದ ಆಪತ್ತನ್ನು ಅರಿತು ಕಹಳೆಯನ್ನು ಮೊಳಗಿಸಿ ತನ್ನ ಸೇನೆಯವರಿಗೆ ಶತ್ರುಪ್ರವೇಶವಾಗಿದೆ ಎಂದು ಸೂಚಿಸಿದ.

ಆಪತ್ಗಹಳೆಯ ಶಬ್ದ ಕೇಳುತ್ತಲೇ ಸಾಗರೋಪಾದಿಯಲ್ಲಿ ಸೇನೆ ನುಗ್ಗಿ ಬಂತು. ಶತ್ರುಗಳೊಡನೆ ಘನಘೊರ ಯುದ್ಧವಾಗಿ ಶತ್ರುಸೇನೆ ದಿಕ್ಕಾಪಾಲಾಗಿ ಓಡಿತು. ಶತ್ರುಗಳ ಸಂಹಾರ ಮಾಡಿ, ಬಳಲಿ ಮೂರ್ಚಿತಳಾಗುತ್ತಾಳೆ ಓಬವ್ವ. ಸೈನಿಕರು ಅವಳನ್ನು ಅರಮನೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ನೀಡಿಸುತ್ತಾರೆ. (ಸಿನಿಮಾ ಕಥೆಗಳಲ್ಲಿ ತೋರುವಂತೆ ಆಕೆ ಅಸು ನೀಗುವುದಿಲ್ಲ) ಶತ್ರುಗಳ ಕುಟಿಲತಂತ್ರವನ್ನು ಸಮಯಸ್ಪೂರ್ತಿಯಿಂದ ಭೇದಿಸಿ ಅಂದಿನ ವಿಜಯಕ್ಕೆ ಕಾರಣಳಾದ ಓಬವ್ವಳ ಸಾಹಸ ಅರಸನಿಂದ ಮೊದಲ್ಗೊಂಡು ಎಲ್ಲ ವರ್ಗದವರ ಪ್ರಶಂಸೆಗೆ ಪಾತ್ರವಾಯಿತು. ಮದಕರಿ ನಾಯಕನು ಓಬವ್ವ ಮತ್ತು ಆಕೆಯ ಬಂಧುಗಳನ್ನು ರಾಜಸಭೆಗೆ ಆಹ್ವಾನಿಸಿ ಆಕೆಯನ್ನು ‘ದುರ್ಗದ ಕೋಟೆಯನ್ನು ರಕ್ಷಿಸಿದ ತಾಯಿ’ ಎಂದು ಶ್ಲಾಘಿಸಿ ಅಗಸಕಲ್ಲು ಗ್ರಾಮವನ್ನು ಜಹಗೀರಾಗಿ ನೀಡಿ, ಜಲಧಿ, ಉತ್ಸವಗಳಲ್ಲಿ ಮಂದಲ ವಂಶಜರಿಗೆ ‘ಓಬವ್ವೆ ವೀಳ್ಯೆ’ ಎಂದು ಗೌರವಿಸಲು ಆದೇಶಿಸಿ, ಪೀತಾಂಬರಗಳಿಂದಾಕೆಯನ್ನು ಅಲಂಕರಿಸಿ ದುರ್ಗದ ತುಂಬ ದೊರೆ ಮೆರವಣಿಗೆ ಮಾಡಿಸಿದನೆಂದು ಓಬವ್ವಳ ವಂಶಜರಾದ ಪ್ರೊ.ಎ.ಡಿ.ಕೃಷ್ಣಯ್ಯನವರು ದಾಖಲಿಸಿದ್ದಾರೆ.

ಈ ಪ್ರಕರಣದ ನಂತರ ಎರಡು ವರ್ಷಗಳ ಕಾಲ ಆಕೆ ಬದುಕಿದ್ದು, ಆಕೆಯ ಕಡೆಯವರು ದೊಡ್ಡಸಿದ್ದವ್ವನಹಳ್ಳಿಯಲ್ಲಿ ನೆಲೆಸಿದರೆಂದು ಅಭಿಪ್ರಾಯಪಡುತ್ತಾರೆ. ಓಬವ್ವ ವಂಶಸ್ಥರು ದುರ್ಗ, ಗೋಸಿಕೆರೆ ಗುಡೆಕೋಟೆ, ಅಗಸನಕಲ್ಲು ಇತ್ಯಾದಿ ಕಡೆ ಈಗಲೂ ನೆಲೆಸಿದ್ದಾರೆ. ಅಷ್ಟೇಕೆ ದುರ್ಗದಲ್ಲಿರುವ ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ತಾವು 7ನೇ ತಲೆಮಾರಿನ ಓಬವ್ವೆಯ ವಂಶಜರು ಎನ್ನುತ್ತಾರೆ.

ಚರಿತ್ರೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿರಾಣಿಯರಂತೆ ಶತ್ರುಗಳ ವಿರುದ್ಧ ಸೆಣಸಾಡಿದ ಒನಕೆ ಓಬವ್ವ ಸಹ ವೀರವನಿತೆಯರ ಸಾಲಿಗೆ ಸೇರುತ್ತಾಳೆಂಬುದು ಅಭಿಮಾನದ ವಿಷಯ. ಇವರೆಲ್ಲ ತಮ್ಮ ರಾಜ್ಯಕ್ಕಾಗಿ ಹೋರಾಡಿದರೆ, ಓಬವ್ವ ನಿಸ್ವಾರ್ಥದಿಂದ ನಾಡಪ್ರೇಮದ ಸಲುವಾಗಿ ಒನಕೆಯನ್ನೇ ಆಯುಧವನ್ನಾಗಿಸಿ ಶತ್ರುಗಳ ನಿರ್ನಾಮ ಮಾಡಿದಳು. ಹೀಗಾಗಿ ಓಬವ್ವ ಎಂದಿಗೂ ಅಜರಾಮರ ಸ್ತ್ರೀಶಕ್ತಿಯ ಸಂಕೇತ. ಓಬವ್ವ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಇಡೀ ನಾರಿಕುಲಕ್ಕೆ ಸಂದ ಗೌರವ. ದುರ್ಗಕ್ಕಷ್ಟೇ ಅಲ್ಲ, ಕನ್ನಡ ನಾಡಿಗೇ ಹೆಮ್ಮೆ ತರುವ ವಿಷಯ.

(ಲೇಖಕರು ಹಿರಿಯ ಸಾಹಿತಿ)

ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ...

ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಯ ಕುರಿತು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಅಧಿಸೂಚನೆ ಹೊರಡಿಸಿತ್ತು. ಇಂದು (ಗುರುವಾರ) ಸರ್ಕಾರದ ವತಿಯಿಂದ ನಡೆಯಬೇಕಿದ್ದ ಜಯಂತಿ ಆಚರಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕ ಇನ್ನೂ ಪ್ರಕಟವಾಗಿಲ್ಲ.