ನ್ಯೂಸ್

ಬಾಡಿಗೆ ಮನೆ ನೋಡುವ ನೆಪದಲ್ಲಿ ಒಳಬಂದು ಮಾಲಕಿಗೆ ಚಾಕು ತೋರಿಸಿ ಸರ ಕಳವು

ಬೆಂಗಳೂರು: ಬಾಡಿಗೆ ಮನೆ ನೋಡುವ ನೆಪದಲ್ಲಿ ಒಳಗೆ ಬಂದ ಅಪರಿಚಿತ ವ್ಯಕ್ತಿ, ಕಟ್ಟಡ ಮಾಲಕಿಗೆ ಚಾಕು ತೋರಿಸಿ ಚಿನ್ನದ ಸರ ದೋಚಿದ್ದಾನೆ.

ಬನಶಂಕರಿ 3ನೇ ಹಂತದ ಪಾಪಯ್ಯ ಗಾರ್ಡನ್ ನಿವಾಸಿ ಕೆ. ತುಳಸಿ ಎಂಬುವರು ಈ ಕುರಿತು ಸಿ.ಕೆ. ಅಚ್ಚುಕಟ್ಟು ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2ನೇ ಮಹಡಿಯಲ್ಲಿ ಬಾಡಿಗೆ ಮನೆ ಇರುವುದಾಗಿ ಗೇಟಿಗೆ ಬೋರ್ಡ್ ಹಾಡಲಾಗಿತ್ತು. 6ರ ಮಧ್ಯಾಹ್ನ 2 ಗಂಟೆಯಲ್ಲಿ ಅಪರಿಚಿತ ವ್ಯಕ್ತಿ, ಮನೆ ಬಳಿಗೆ ಹೋಗಿ ಬೆಲ್ ಮಾಡಿ ‘ಮನೆ ಬಾಡಿಗೆಗೆ ಇದೆಯೇ’ ಎಂದು ಪ್ರಶ್ನಿಸಿದ್ದ. ತುಳಸಿ ಅವರು 2ನೇ ಮಹಡಿಗೆ ಕರೆದುಕೊಂಡು ಹೋಗಿ ಮನೆ ತೋರಿಸುತ್ತಿದ್ದರು.

ಆಗ ಆರೋಪಿ, ಬೆಡ್ ರೂಮ್‌ನಲ್ಲಿ ಕಿಟಕಿ ಎಲ್ಲಿದೆ ಎಂದು ಕೇಳಿದಾಗ ಮಾಲಕಿ, ರೂಮ್‌ಗೆ ಕರೆದೊಯ್ದು ತೋರಿಸಲು ಮುಂದಾದಾಗ ಡೋರ್ ಲಾಕ್ ಮಾಡಿ ಚಾಕು ತೋರಿಸಿ ‘ಕೂಗಿಕೊಂಡರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಸಿದ್ದ. ಬಳಿಕ ತುಳಸಿ ಬಳಿಯಿದ್ದ 8 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದಾನೆ.