ಮಾನ್ವಿ: ರಾಜ್ಯದಲ್ಲಿ ಕಾಂತರಾಜ ಅಯೋಗವು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೂ ರಾಜ್ಯ ಸರ್ಕಾರ ಅಂಗೀಕರಿಸಲಿಲ್ಲ. ಆದ್ದರಿಂದ ಹಿಂದುಳಿದ ವರ್ಗದ ಜನರಿಗೆ ಮೀಸಲಾತಿ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಎರಡನೇ ಸಲ ಜಾತಿ ಸಮೀಕ್ಷೆಗೆ ಮುಂದಾಗಿದೆ. ಸೆ. 22 ರಿಂದ ಜಾತಿಗಣತಿ ಸೇರಿದಂತೆ ಪ್ರತಿ ಕುಟುಂಬದ ಶೈಕ್ಷಣಿಕ, ಆರ್ಥಿಕ ಅಂಶಗಳು ಸೇರಿದಂತೆ ಅಗತ್ಯವಿರುವ ಅಂಶಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ.
ಪ್ರತಿಯೊಬ್ಬರೂ ಶಾಲಾ ದಾಖಲಾತಿಗಳಲ್ಲಿರುವಂತೆ ಸಂಪೂರ್ಣ ಮಾಹಿತಿಯನ್ನು ಮನೆಗೆ ಬರುವ ಗಣತಿದಾರರಿಗೆ ನೀಡಬೇಕು. ಸಂವಿಧಾನದ ಮೀಸಲಾತಿ ಲಾಭ ಎಲ್ಲ ಸಮುದಾಯಗಳಿಗೂ ಸಿಗಬೇಕು. ಹೀಗಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸೆ. 14 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಜಾತಿ ಸಮೀಕ್ಷೆ ಮಹತ್ವ ಕುರಿತು ಸಮಾಜ ವಿಜ್ಞಾನಿ ಎ.ನಾರಾಯಣ, ಶೋಷಿತ ಸಮುದಾಯಗಳು ಸಾಗಬೇಕಾದ ಹಾದಿ ಕುರಿತು ಕೆ.ಕೃಷ್ಣಪ್ಪ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಪದಾಧಿಕಾರಿಗಳ ಆಯ್ಕ: ಸಭೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಲಕ್ಷ್ಮೀನಾರಾಯಣ ಯಾದವ (ಗೌರವಾಧ್ಯಕ್ಷ), ಎಂ.ಪ್ರವೀಣ್ ಕುಮಾರ್ (ಅಧ್ಯಕ್ಷ), ಜಿ.ನಾಗರಾಜ (ಕಾರ್ಯಧ್ಯಕ್ಷ), ಯಂಕಣ್ಣ ಯಾದವ್, ಸಿ.ಗಂಗಾಧರ, ಮಂಜುನಾಥಗೌಡ, ಉಮಾಪತಿ.ಜಿ, ವೀರೇಶ ಉಪ್ಪಾರ, ನಾಗರಾಜ ಹರವಿ, ಯಲ್ಲಪ್ಪ, ಬಸವರಾಜ ಹೂಗಾರ (ಉಪಾಧ್ಯಕ್ಷರು), ನರಸಿಂಹ ಹೆಳವರ್ (ಪ್ರಧಾನ ಕಾರ್ಯದರ್ಶಿ), ಭೀಮರಾಯ ಶೀತಿಮನಿ (ಖಜಾಂಚಿ), ಡಿ. ವೀರೇಶ, ಕನಕಪ್ಪ ಯಾದವ್, ಧನುಂಜಯ ಪತ್ತಾರ, ವಿನೋದ್ ಕುಮಾರ್, ವೈ, ವೀರೇಶರೆಡ್ಡಿ (ಕಾರ್ಯದರ್ಶಿ), ತುಳುಜಾರಾಮ್ ಸಿಂಗ್, ಶಿವಕುಮಾರ ಚಲ್ಮಲ್, ವಿಜಯಕುಮಾರ್ ಗೌಡ, ಬಾಳಪ್ಪ, ಮೌಲಪ್ಪ ಚೀಕಲಪರ್ವಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ ಇತರರಿದ್ದರು.