ವಿನೋಬನಗರದ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ ಅಧ್ಯಕ್ಷ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು. 
ನ್ಯೂಸ್

ಜೂ.6ರಂದು ಶ್ರೀ ಶನೈಶ್ಚರ ಜಯಂತಿ, ಮಹಾರಥೋತ್ಸವ

ಶಿವಮೊಗ್ಗ: ವಿನೋಬನಗರದ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನಿಂದ ಜೂ.6ರಂದು ಶ್ರೀ ಶನೈಶ್ಚರ ಜಯಂತಿ ಹಾಗೂ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶನೈಶ್ಚರ ದೇವಾಲಯವು ಕಳೆದ 16 ವರ್ಷಗಳಿಂದ ಭಕ್ತರ ಶ್ರೇಯಸ್ಸು ಮತ್ತು ಲೋಕಕಲ್ಯಾಣಾರ್ಥವಾಗಿ ಅನೇಕ ಧಾರ್ಮಿಕ ಕಾರ್ಯಕಮಗಳನ್ನು ನಡೆಸಿಕೊಂಡು ಬಂದಿದೆ. ಪ್ರತಿ ವರ್ಷದಂತೆ ಈ ಬಾರಿ ವೈಶಾಖ ಅಮಾವಾಸ್ಯೆಯಂದು ಅದ್ದೂರಿಯಾಗಿ ರಥೋತ್ಸವ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೀಗ ಮಹಾರಥೋತ್ಸವ, ದಿವ್ಯ ಸತ್ಸಂಗ, ಕುಂಭಾಭಿಷೇಕ, ಭೂತಬಲಿ ಶಯನೋತ್ಸವ, ಶನಿಶಾಂತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 6ರ ಬೆಳಗ್ಗೆ 10.30ಕ್ಕೆ ಶನೈಶ್ಚರ ಜಯಂತಿ ಅಂಗವಾಗಿ ಗಣೇಶ ಪೂಜೆ, ಗ್ರಹಯಾಗ ಮತ್ತು ಮಹಾರಥೋತ್ಸವ ನಡೆಯಲಿದೆ. ನಂತರ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಥೋತ್ಸವ ಅಂಗವಾಗಿ ವಿಶೇಷ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅದಕ್ಕೂ ಪೂರ್ವದಲ್ಲಿ ಜೂ.4ರಂದು ಶ್ರೀ ಕ್ರೋಧಿನಾಮ ಸಂವತ್ಸರ ವೈಶಾಖ ತ್ರಯೋದಶಿಯಂದು ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ 15ನೇ ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ 8ರಿಂದ ಕಲಾಹೋಮ, ಪೂರ್ಣಾಹುತಿ, 11.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ. ಜೂ.5ರ ಸಂಜೆ 6.30ಕ್ಕೆ ದೇವಾಲಯದ ಮುಂಭಾಗದ ಆವರಣದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ವಿಶಂಕರ್ ಗುರೂಜಿ ಶಿಷ್ಯರಾದ ಗಾಯಕ ಶ್ರೀನಿವಾಸ್ ಮತ್ತು ಶಾಲಿನಿ ಶ್ರೀನಿವಾಸ್ ತಂಡದಿಂದ ಸತ್ಸಂಗ ನಡೆಯಲಿದೆ ಎಂದಿ ತಿಳಿಸಿದರು.
ಜೂ.7ರಂದು ಪ್ರಬೋಧೋತ್ಸವ, 108 ಕಲಶ ಸ್ಥಾಪನೆ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಟ್ರಸ್ಟ್ ಕಾರ್ಯದರ್ಶಿ ಸ.ನ.ಮೂರ್ತಿ, ಉಪಾಧ್ಯಕ್ಷ ವಿ.ರಾಜು, ಪ್ರಮುಖರಾದ ಕೆ.ಇ.ಕಾಂತೇಶ್, ವಿನಾಯಕ ಬಾಯಿರಿ, ಶಬರೀಶ್ ಕಣ್ಣನ್, ಪವನ್ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.