Ramlila : ರಾಮಾಯಣ ನಾಟಕ ಪ್ರದರ್ಶನದ ವೇಳೆ ರಾಮಲೀಲಾ ವೇದಿಕೆಯಲ್ಲೇ ದಶರಥ ಪಾತ್ರಧಾರಿ ಹೃದಯಸ್ತಂಭನದಿಂದ ಮೃತಪಟ್ಟಿರುವ ದುರಂತ ಘಟನೆ ಹಿಮಾಚಲ ಪ್ರದೇಶದ ಚಂಬಾದಲ್ಲಿ ನಡೆದಿದೆ.
ಮೃತ ನಟನನ್ನು ಅಮರೇಶ್ ಮಹಾಜನ್ ಎಂದು ಗುರುತಿಸಲಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ರಾಮಲೀಲಾ ಪ್ರದರ್ಶನದಲ್ಲಿ ದಶರಥ ಪಾತ್ರವನ್ನು ನಿರ್ವಹಿಸುತ್ತಿದ್ದರು. ಪ್ರದರ್ಶನದ ಮಧ್ಯದಲ್ಲೇ ಮಹಾಜನ್ ಅವರು ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದರು. ಕಾರ್ಡಿಯಾಕ್ ಅರೆಸ್ಟ್ನಿಂದ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಅಮರೇಶ್ ಮಹಾಜನ್ ಅವರು ಸುಮಾರು 25 ವರ್ಷಗಳಿಂದ ಚಂಬಾ ಚೌಗನ್‌ನಲ್ಲಿರುವ ರಾಮಲೀಲಾದಲ್ಲಿ ಪ್ರದರ್ಶನ ನೀಡುತ್ತಿದ್ದರು. ಅವರು ಸಾಮಾನ್ಯವಾಗಿ ರಾಮನ ತಂದೆ ರಾಜ ದಶರಥ ಅಥವಾ ರಾಮಾಯಣದ ಪ್ರಮುಖ ವಿಲನ್ ರಾವಣನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇಳಿ ವಯಸ್ಸಿನ ಹೊರತಾಗಿಯೂ, ಅವರು ಪ್ರತಿ ವರ್ಷ ಈ ಭವ್ಯ ಪ್ರದರ್ಶನಕ್ಕಾಗಿ ಅಭ್ಯಾಸ ಮಾಡಿ ವೇದಿಕೆಯ ಮೇಲೆ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದರು. ಈ ಬಾರಿಯ ರಾಮಲೀಲಾ ಆಯೋಜನೆಗೂ ಮುನ್ನವೇ ಇದು ನನ್ನ ಕೊನೆಯ ರಾಮಲೀಲಾ ಎಂದು ಆಯೋಜಕರಿಗೆ ಮೊದಲೇ ಹೇಳಿದ್ದರು. ಆದರೆ, ವಿಧಿಯಾಟ ಹೇಗಿದೆ ಅಂದರೆ, ಅದು ನಿಜವೂ ಆಗಿದೆ.
ನಿನ್ನೆ ರಾತ್ರಿ 8.30 ರ ಸುಮಾರಿಗೆ, ರಾಮಲೀಲಾ ಪ್ರದರ್ಶನವು ಭರದಿಂದ ಸಾಗಿತ್ತು. ರಾಜ ದಶರಥನ ಪಾತ್ರದಲ್ಲಿದ್ದ ಅಮರೇಶ್ ಮಹಾಜನ್ ಸಿಂಹಾಸನದ ಮೇಲೆ ಕುಳಿತು ಸಂಭಾಷಣೆಗಳನ್ನು ಹೇಳುತ್ತಿದ್ದರು. ಅವರ ಎಡಭಾಗದಲ್ಲಿ ಓರ್ವ ನಟ ಋಷಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ವೇಳೆ ಸಂಭಾಷಣೆಯ ಮಧ್ಯದಲ್ಲೇ ದಶರಥ ಪಾತ್ರಧಾರಿ ಮಹಾಜನ್ ಅವರು ಎಡಕ್ಕೆ ಬಾಗಿ ಸಹ-ನಟನ ಭುಜದ ಮೇಲೆ ತಮ್ಮ ತಲೆಯನ್ನು ಇಟ್ಟರು. ಆರಂಭದಲ್ಲಿ ಒಂದು ಕ್ಷಣ ವೇದಿಕೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಪಕ್ಕದಲ್ಲಿದ್ದ ಕಲಾವಿದನಿಗೆ ಏನೂ ತೋಚಲಿಲ್ಲ. ಆದರೆ, ಏನೋ ತಪ್ಪಾಗಿದೆ ಎಂದು ಶೀಘ್ರದಲ್ಲೇ ಅರಿತುಕೊಂಡು, ಪಕ್ಕದಲ್ಲಿದ್ದ ಮತ್ತೊಬ್ಬ ಕಲಾವಿದನಿಗೆ ತಿಳಿಸಿದರು. ಆದರೆ, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಭಿನಯ ಮುಂದುವರಿದಿತ್ತು. ಇತರ ನಟರು ತಮ್ಮ ನಟನೆಯಲ್ಲಿ ತೊಡಗಿದ್ದರು. ಏನೋ ನಡೆದಿದೆ ಎಂದು ಎಲ್ಲರಿಗೆ ಅರಿವಾಗುವ ಮೊದಲು ಸುಮಾರು 10 ಸೆಕೆಂಡುಗಳು ಕಳೆದವು. ಬಳಿಕ ಋಷಿಯ ಪಾತ್ರವನ್ನು ನಿರ್ವಹಿಸಿದ ನಟ ಸಹಾಯಕ್ಕಾಗಿ ಕರೆದಾಗ ವೇದಿಕೆಯ ಹಿಂದಿನ ತಂಡದ ಸದಸ್ಯರು ವೇದಿಕೆಯನ್ನು ಪ್ರವೇಶಿಸಿದರು. ತಕ್ಷಣ ಪರದೆಯನ್ನು ಎಳೆದರು. ಬಳಿಕ ಮಹಾಜನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.
ಚಂಬಾದ ಶ್ರೀ ರಾಮಲೀಲಾ ಕ್ಲಬ್‌ನ ಅಧ್ಯಕ್ಷರಾದ ಸ್ವಪನ್ ಮಹಾಜನ್ ಈ ಬಗ್ಗೆ ಮಾತನಾಡಿದ್ದು, ವೇದಿಕೆಯಲ್ಲಿ ಅಮರೇಶ್ ಮಹಾಜನ್ ಅವರ ಮರಣದಿಂದ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಮಹಾಜನ್ ಅವರು ವೇದಿಕೆಯಲ್ಲಿ ಕುಸಿದು ಬಿದ್ದರು ಮತ್ತು ನಾವು ಅವರನ್ನು ಪಂಡಿತ್ ಜವಾಹರ್ ಲಾಲ್ ನೆಹರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದೆವು ಆದರೆ, ವೈದ್ಯರು ಅವರು ಸತ್ತಿದ್ದಾರೆಂದು ಘೋಷಿಸಿದರು. ಮಹಾಜನ್ ಅವರ ಹಠಾತ್ ಮರಣದಿಂದ ನಾವು ದುಃಖಿತರಾಗಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿಯ ಶಹದಾರಾದಲ್ಲಿ ನಡೆದ ರಾಮಲೀಲಾ ಪ್ರದರ್ಶನದ ಸಂದರ್ಭದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ ನಟ ಸಾವಿಗೀಡಾದ ಒಂದು ವರ್ಷದ ನಂತರ ಈ ಘಟನೆ ಸಂಭವಿಸಿದೆ. ಆಸ್ತಿ ವ್ಯಾಪಾರಿ ಸುಶೀಲ್ ಕೌಶಿಕ್ ತಮ್ಮ ಸಂಭಾಷಣೆಗಳನ್ನು ಪ್ರಸ್ತುತ ಪಡಿಸುವಾಗ ಎದೆಯನ್ನು ಬಿಗಿದಿಡಿದುಕೊಂಡು ವೇದಿಕೆಯಿಂದ ಹೊರಗೆ ಹೋಗಿ ಕುಸಿದು ಬಿದ್ದರು.
ಅಂದಹಾಗೆ, ಹಿಮಾಚಲ ಪ್ರದೇಶದಲ್ಲಿ ರಾಮಲೀಲಾ ಕಾರ್ಯಕ್ರಮವು ರಾಮಾಯಣದ ಕಥೆಯನ್ನು ನಾಟಕೀಯ ರೂಪದಲ್ಲಿ ಪ್ರದರ್ಶಿಸುವ ಸಾಂಸ್ಕೃತಿಕ ಹಬ್ಬವಾಗಿದ್ದು, ವಿಶೇಷವಾಗಿ ನವರಾತ್ರಿ ಮತ್ತು ದಸರಾ ಸಮಯದಲ್ಲಿ ನಡೆಯುತ್ತದೆ. (ಏಜೆನ್ಸೀಸ್)