ನ್ಯೂಸ್

VIDEO| ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಮ್ಯಾನ್​ ಹೋಲ್​ ಒಳಗೆ ಬಿದ್ದ ಮಹಿಳೆಯರು!

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟದಿಂದ ಅವಾಂತರ ಸೃಷ್ಟಿಯಾಗಿದ್ದು, ನಿಮಿಷಗಳ ಅಂತರದಲ್ಲಿ ಮಹಿಳೆಯರಿಬ್ಬರು ತೆರೆದ ಮ್ಯಾನ್​ ಹೋಲ್​ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್​ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವಂತೆ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಪುಟ್​ಪಾತ್​ ಮೇಲೆ ನಡೆದು ಹೋಗುತ್ತಿದ್ದ ಮಹಿಳೆಯರು ಒಬ್ಬರ ಹಿಂದಂತೆ ಒಬ್ಬರು ನಿಮಿಷಗಳ ಅಂತರದಲ್ಲಿ ಮ್ಯಾನ್​ ಹೋಲ್​ಗೆ ಒಳಗೆ ಬೀಳುತ್ತಾರೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಮುಂಬೈ ನಾಗರಿಕ ಮಂಡಳಿ ಬಿಎಂಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೆರೆದಿರುವ ಮ್ಯಾನ್​ ಹೋಲ್​ಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.

ಮುಂಗಾರು ಪೂರ್ವ ಮಳೆಗೂ ಮುನ್ನ ಮ್ಯಾನ್​ ಹೋಲ್​ಗಳ ದುರಸ್ಥಿ ಕಾರ್ಯ ನಗರದಲ್ಲಿ ನಡೆಯುತ್ತಿತ್ತು. ಆದರೆ, ನಿನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಬಿಎಂಸಿ, ಮ್ಯಾನ್​ ಹೋಲ್​ಗಳನ್ನು ಮುಚ್ಚಲು ಸೂಚನೆ ನೀಡಿದೆ. (ಏಜೆನ್ಸೀಸ್​)