ಸಾಗರ: ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜೂ.23 ಮತ್ತು 24ರಂದು ಶಾರದಾಂಬಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ, ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಾರೋಡಿ ಕೊಂಕಣಿ ಆಚಾರ್ ಸಮಾಜದ ಅಧ್ಯಕ್ಷ ಕೆ.ವಿ.ಜಯರಾಮ್ ಹೇಳಿದರು.
ಸಾಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಾರದಾಂಬಾ ದೇವಸ್ಥಾನದ ಚಾರೋಡಿ ಕೊಂಕಣಿ ಆಚಾರ್ ಸಮಾಜದಿಂದ ಪಠ್ಯಪುಸ್ತಕ ವಿತರಣೆ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
23ರಂದು ಸಂಜೆ 5.30ಕ್ಕೆ ಶ್ರೀಗಳು ಸಾಗರಕ್ಕೆ ಆಗಮಿಸಲಿದ್ದು, ಶಿವಪ್ಪನಾಯಕ ವೃತ್ತದಲ್ಲಿ ಶ್ರೀಗಳಿಗೆ ಸ್ವಾಗತ ಕೋರಲಾಗುತ್ತದೆ. ಅಲ್ಲಿಂದ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸಮಾಜ ನಮ್ಮನ್ನು ಗುರುತಿಸುತ್ತಿದ್ದು ಇನ್ನಷ್ಟು ಆಸಕ್ತಿಯಿಂದ ಓದಬೇಕು ಎನ್ನುವ ಛಲ ಮೂಡುತ್ತದೆ. ಮಕ್ಕಳು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಓದಿನತ್ತ ಹೆಚ್ಚು ಆಸಕ್ತಿ ವಹಿಸಬೇಕು. ಪಾಲಕರು, ಸಮಾಜ ನಿಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಉಪಾಧ್ಯಕ್ಷ ವಿ.ಚಂದ್ರಶೇಖರ್, ಪ್ರಮುಖರಾದ ಕೆ.ಹರೀಶ್, ಕೃಷ್ಣಮೂರ್ತಿ ವಾಮನಾಚಾರ್, ಜಿ.ಕುಮಾರ್, ದಿವಾಕರ್, ರಾಮಚಂದ್ರ ನಾಯಕ್, ರಾಜೇಂದ್ರ, ಪದ್ಮಾಕರ, ದೇವರಾಜ, ಲಲಿತಾ ವಿಠ್ಠಲ್ ಆಚಾರ್, ರಾಘವೇಂದ್ರ, ಚಂದ್ರಶೇಖರ್ ಇತರರಿದ್ದರು.