ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ನಗರಸಭೆಯ ಸ್ಥಾಯಿ ಸಮಿತಿ ರಚನೆಯ ಪ್ರಕ್ರಿಯೆಯಲ್ಲಿ ಲೋಪಗಳ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಮಗ್ರ ವರದಿ ನೀಡಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪೌರಾಯುಕ್ತರಿಗೆ ಸೂಚಿಸಿದ್ದಾರೆ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಪ್ರಕ್ರಿಯೆ ಅಜೆಂಡಾ ಹಾಗೂ ಠರಾವು ಪ್ರತಿ, ಅಧ್ಯಕ್ಷರ ಆಯ್ಕೆಯ ದೃಢೀಕರಣ ಸೇರಿ ಹಲವು ದಾಖಲೆಗಳಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದರೂ ಕಾಲಹರಣ ಮಾಡಲಾಗುತ್ತಿದೆ ಎಂದು ಸದಸ್ಯ ಆರ್.ಮಟಮಪ್ಪ ಆರೋಪಿಸಿದ್ದು ಇದರ ಬಗ್ಗೆ ದೂರು ಸ್ವೀಕರಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ಕಚೇರಿಯು ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯ ಸಮಗ್ರ ವರದಿ ನೀಡಲು ಪೌರಾಯುಕ್ತರಿಗೆ ಸೂಚಿಸಿದೆ.
11 ಸದಸ್ಯರ ಆಯ್ಕೆ: ನಗರಸಭೆಯ ಸರ್ ಎಂ.ವಿ.ಸಭಾಂಗಣದಲ್ಲಿ ಜು.22 ರಂದು ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯ ವಿಷಯ ಚರ್ಚಿಸಲಾಗಿತ್ತು. ಆದರೆ ಇದರಲ್ಲಿ ಕೈಗೊಂಡ ತೀರ್ಮಾನವನ್ನು ಜಾರಿಗೆ ತರದೇ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹಾಗೂ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ತಯಾರಿಸಿದ ಸದಸ್ಯರ ಪಟ್ಟಿಯ ಆಯ್ಕೆಗೆ ಕಸರತ್ತು ನಡೆಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿತ್ತು. ಇದರ ನಡುವೆ ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ಸೆಕ್ಷನ್ ಕಲಂ 63 ರಂತೆ ಕನಿಷ್ಠ 5 ರಿಂದ 11 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಸದಸ್ಯರ ಆರೋಪಗಳು
ನಗರಸಭೆಯಲ್ಲಿ ರಾಜಕೀಯ ಪ್ರಭಾವಕ್ಕೊಳಗಾಗಿ ಕಾನೂನು ನಿಯಮಗಳನ್ನು ಬದಿಗೊತ್ತಲಾಗುತ್ತಿದೆ. ಸರ್ಕಾರದ ಆದೇಶವಿದ್ದರೂ ಜನರಿಗೆ ಖಾತೆಗಳನ್ನು ವಿತರಿಸುತ್ತಿಲ್ಲ. ಹಲವು ಬಾರಿ ಕಚೇರಿಗೆ ಅಲೆದಾಡಿಸಲಾಗುತ್ತಿದೆ. ಇದರ ಪಾಡು ಹೇಳ ತೀರದಾಗಿದೆ. ಆಡಳಿತ ವ್ಯವಸ್ಥೆಯಲ್ಲೂ ನಾನಾ ಲೋಪಗಳಿವೆ. ಆ.1 ಹಾಗೂ ಆ.25 ರಂದು ಸ್ಥಾಯಿ ಸಮಿತಿಯ ಜು.22 ರಂದು ನಡೆದ ಅಜೆಂಡಾ ಹಾಗೂ ಠರಾವು ಪ್ರತಿ, ಆ.13 ರಂದು ಸ್ಥಾಯಿ ಸಮಿತಿ ರಚನೆ ಅಧ್ಯಕ್ಷರ ಆಯ್ಕೆ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೆ ಇದನ್ನು ನೀಡದೇ ಬೇವಾಬ್ದಾರಿಯಿಂದ ವರ್ತಿಸಿರುವ ಪೌರಾಯುಕ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಆರ್.ಮಟಮಪ್ಪ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕ್ರಿಯೆ ಮುಗಿದರೂ ವಿವಾದ
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಬ್ರಮಣ್ಯಾಚಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಈಗಾಗಲೇ ಅಧಿಕಾರವನ್ನೂ ಸ್ವೀಕರಿಸಿದ್ದಾರೆ. ಇದೆಲ್ಲ ಪ್ರಕ್ರಿಯೆ ನಡೆದರೂ ವಿವಾದ ಮಾತ್ರ ಮುಗಿದಿಲ್ಲ. ದೃಢೀಕೃತ ದಾಖಲೆಗಳೊಂದಿಗೆ ಕಾನೂನು ಹೋರಾಟ ನಡೆಸುವ ನಿಟ್ಟಿನಲ್ಲಿ ಆರ್.ಮಟಮಪ್ಪ ಮುಂದಾಗಿದ್ದಾರೆ.
ಅಲ್ಪಾವಧಿ ಅಧಿಕಾರಕ್ಕೆ ಗಲಾಟೆ
ಇಲ್ಲಿನ ನಗರಸಭೆಯಲ್ಲಿ 1 ದಶಕದ ಬಳಿಕ ಸ್ಥಾಯಿ ಸಮಿತಿ ರಚನೆಯಾಗಿದ್ದು, 2 ತಿಂಗಳು ಮಾತ್ರ ಅಧಿಕಾರ ಇದೆ. ಇದರ ಅಲ್ಪಾವಧಿಯಲ್ಲಿ ವಿವಾದ ಗಲಾಟೆಯು ನಡೆಯುತ್ತಿದ್ದು ಬಾಕಿ ಉಳಿದ ಯೋಜನೆಗಳು, ಅಭಿವೃದ್ಧಿ ಕೆಲಸಗಳ ಅನುಷ್ಠಾನದಲ್ಲಿ ಹಿನ್ನಡೆಯ ಸಮಸ್ಯೆ ಕಾಡಲಿದೆ ಎನ್ನಲಾಗುತ್ತಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಏಕಪಯ ತೀರ್ಮಾನ ಖಂಡಿಸಿ ಪ್ರತಿಟನೆ ನಡೆಸಲಾಗಿತ್ತು. ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಸಭಾಂಗಣದಲ್ಲಿ ಮಟಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು ಚುನಾವಣಾ ಪ್ರಕ್ರಿಯೆ ಬಗ್ಗೆ ಮೊದಲೇ ದೂರು ಸಲ್ಲಿಸಿದ್ದರೂ ಆೇಪ ಪರಿಗಣಿಸಲಾಗಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ ರಚನೆ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ. ಇದರ ವಿರುದ್ಧ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ.
| ಆರ್.ಮಟಮಪ್ಪ ನಗರಸಭೆ ಸದಸ್ಯ