ಕುವೆಂಪು ವಿವಿ ಆಡಳಿತ ವೈಖರಿ ಖಂಡಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಸಾಗರದಲ್ಲಿ ಎಸಿ ಆರ್.ಯತೀಶ್ ಅವರಿಗೆ ಮನವಿ ಸಲ್ಲಿಸಿದರು. ಎನ್.ವಿಜಯ, ವಿದ್ಯಾರ್ಥಿಗಳು ಇದ್ದರು.  
ನ್ಯೂಸ್

ಅಂಕಪಟ್ಟಿ ಮುದ್ರಣದಲ್ಲಿ ಲೋಪ

ಶಿವಕುಮಾರ ಎಸ್.ಪಿ.

ಸಾಗರ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಹಾಗೂ ಅಸಮರ್ಪಕ ಆಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಸಾಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಆರ್.ಯತೀಶ್ ಅವರಿಗೆ ಮನವಿ ಸಲ್ಲಿಸಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಯೋಜನೆಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪ್ರಸಾರಾಂಗ ವಿಭಾಗದಲ್ಲಿ ಸುಮಾರು 50 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಅಂಕಪಟ್ಟಿ ಮುದ್ರಣದಲ್ಲಿಯೂ ಸರ್ಕಾರದ ನಿರ್ದೇಶನ ಪಾಲಿಸಿಲ್ಲ ಎಂದು ದೂರಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ಇದರಿಂದ ಉನ್ನತ ವಿದ್ಯಾಭ್ಯಾಸದ ಆಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಏಕರೂಪ ವೇಳಾಪಟ್ಟಿ ಕುರಿತು ರಾಜ್ಯ ಸರ್ಕಾರದ ನಿರ್ದೇಶನ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ತಕ್ಷಣ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಎಬಿವಿಪಿ ನಗರ ಕಾರ್ಯದರ್ಶಿ ಎನ್.ವಿಜಯ, ವಿದ್ಯಾರ್ಥಿ ಪರಿಷತ್ ಪ್ರಮುಖರು, ವಿದ್ಯಾರ್ಥಿಗಳು ಹಾಜರಿದ್ದರು