ನವದೆಹಲಿ: ದೇಶಾದ್ಯಂತ ಇದೀಗ ಒಮಿಕ್ರಾನ್ ಸೋಂಕಿನ ಒಟ್ಟಾರೆ ಪ್ರಕರಣ ಶತಕವನ್ನೂ ದಾಟಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಈ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ರೂಪಾಂತರಿ ವೈರಸ್ನ ಆತಂಕವನ್ನು ಮತ್ತಷ್ಟು ಹೆಚ್ಚಾಗಿಸಿದೆ.
ಪ್ರಪಂಚದ 91 ದೇಶಗಳಲ್ಲಿ ಕಂಡುಬಂದಿರುವ ಒಮಿಕ್ರಾನ್ ಸೋಂಕು ಪ್ರಕರಣ, ಡೆಲ್ಟಾ ವೇರಿಯಂಟ್ಗಿಂತಲೂ ವೇಗವಾಗಿ ಹರಡುತ್ತಿರುವುದು ಕಂಡುಬಂದಿದೆ. ಇದೇ ಗತಿಯಲ್ಲಿ ಸಾಗಿದರೆ ಅದು ಡೆಲ್ಟಾಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇನ್ನೊಂದೆಡೆ ಭಾರತದಲ್ಲಿ ಈಗಾಗಲೇ ಹನ್ನೊಂದು ರಾಜ್ಯಗಳಲ್ಲಿ ಒಮಿಕ್ರಾನ್ ಕಂಡುಬಂದಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 101ಕ್ಕೆ ತಲುಪಿದೆ. ಅಲ್ಲದೆ ಸೋಂಕು ವೇಗವಾಗಿ ಹರಡುತ್ತಿದ್ದು, ಶೀಘ್ರದಲ್ಲೇ ಒಟ್ಟಾರೆ ಕೋವಿಡ್ ಸೋಂಕಿನ ಶೇ. 2.4ರಷ್ಟಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ. ಸಾರ್ವಜನಿಕರು ದೂರಪ್ರಯಾಣ, ಗುಂಪುಗೂಡುವಿಕೆಯನ್ನು ಆದಷ್ಟೂ ಕಡಿಮೆ ಮಾಡಬೇಕು ಎಂಬುದಾಗಿಯೂ ಅವರು ಸಲಹೆ ನೀಡಿದ್ದಾರೆ.