ನ್ಯೂಸ್

ಮೊದಲ ಬಾರಿಗೆ 21 ಕಿ.ಮೀ. ಪೂರ್ಣಗೊಳಿಸಿದ್ದೀನಿ; ಮ್ಯಾರಥಾನ್​​ನಲ್ಲಿ ಭಾಗವಹಿಸಿದ್ದ ಸಿಎಂ Omar Abdullah ಹೇಳಿದಿಷ್ಟು..

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳ ನಂತರ ಒಮರ್​ ಅಬ್ದುಲ್ಲಾ(Omar Abdullah) ಅವರು ಮ್ಯಾರಥಾನ್​​ನಲ್ಲಿ ಭಾಗವಹಿಸಿ 21 ಕಿಲೋಮೀಟರ್​ ಓಡುವ ಮೂಲಕ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

ಭಾನುವಾರ (ಅಕ್ಟೋಬರ್​​ 20) ಬೆಳಗ್ಗೆ 6.20ರ ಸುಮಾರಿಗೆ ಸಿಎಂ ಒಮರ್ ಅಬ್ದುಲ್ಲಾ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಶ್ರೀನಗರದ ಪೋಲೋ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್ ರೇಸ್‌ಗೆ ಚಾಲನೆ ನೀಡಿದರು. ಕೆಲಕಾಲ ಕ್ರೀಡಾಪಟುಗಳೊಂದಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದರು. ಅವರ ಜತೆಗೆ ಭದ್ರತಾ ಸಿಬ್ಬಂದಿಯೂ ಇದ್ದರೂ.

ನನ್ನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಈ ಹಾಫ್​ ಮ್ಯಾರಥಾನ್​ನಲ್ಲಿ ಪ್ರತಿ ಕಿಲೋಮೀಟರ್​​​​ ಅನ್ನು ಸರಾಸರಿ 5 ನಿಮಿಷ 54 ಸೆಕೆಂಡ್​ ವೇಗದಲ್ಲಿ ಪೂರ್ಣಗೊಳಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಒಮರ್​ ಅಬ್ದುಲ್ಲಾ ಪೋಸ್ಟ್​ ಮಾಡಿದ್ದಾರೆ. ನಾನು ನನ್ನ ಜೀವನದಲ್ಲಿ ಎಂದಿಗೂ 13 ಕಿ.ಮೀ.ಗಿಂತ ಹೆಚ್ಚು ಓಡಿಲ್ಲ. ಅದು ಒಂದೇ ಒಂದು ಬಾರಿ ಮಾತ್ರ, ಇಂದು ನಾನು ನನ್ನಂತಹ ಇತರ ಹವ್ಯಾಸಿ ಓಟಗಾರರ ಉತ್ಸಾಹದಿಂದ ಮುನ್ನಡೆದಿದ್ದೇನೆ ಎಂದು ಹೇಳಿದ್ದಾರೆ.

ಮ್ಯಾರಥಾನ್​ ಕುರಿತು ಮಾತನಾಡಿದ ನಟ ಸುನೀಲ್​ ಶೆಟ್ಟಿ, ಜನರು ಕಾಶ್ಮೀರಕ್ಕೆ ಬರಲು ಬಯಸುತ್ತಾರೆ. ಈ ರೀತಿಯ ಘಟನೆಯು ಇಡೀ ಜಗತ್ತಿಗೆ ಸಂದೇಶವನ್ನು ನೀಡುತ್ತದೆ. ಪ್ರಪಂಚದಾದ್ಯಂತದ ಜನರು ಇಲ್ಲಿ ಭಾಗವಹಿಸಲು ಬರುತ್ತಿದ್ದು ಇದು ದೊಡ್ಡ ವಿಷಯವಾಗಿದೆ. ಈ ಸ್ಥಳ ಜಗತ್ತಿಗೆ ಸ್ವರ್ಗವಾಗಿದೆ ಎಂದು ಹೇಳಿದ್ದಾರೆ.

ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬುದನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಶ್ಮೀರವು ಎಲ್ಲರಿಗೂ ಮುಕ್ತವಾಗಿದೆ. ನಾವು ಪ್ರಪಂಚದ ವಿವಿಧ ಭಾಗಗಳ ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ಯಾರಾದರೂ 42 ಕಿಲೋಮೀಟರ್ ಓಡುತ್ತಿದ್ದರೆ, ಅದು ಕಾಶ್ಮೀರ ಈಗ ಶಾಂತಿಯುತವಾಗಿದೆ ಎಂಬ ಸಂದೇಶವಾಗಿದೆ ಎಂದು ಪ್ರವಾಸೋದ್ಯಮ ನಿರ್ದೇಶಕ ರಾಜಾ ಯಾಕೂಬ್ ತಿಳಿಸಿದರು.

ಕಾಶ್ಮೀರದಲ್ಲಿ ಮೊದಲ ಬಾರಿಗೆ ಮೆಗಾ ಇಂಟರ್‌ನ್ಯಾಷನಲ್ ಮ್ಯಾರಥಾನ್ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ 2 ಸಾವಿರ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳು 42 ಕಿಲೋಮೀಟರ್‌ಗಳ ಪೂರ್ಣ ಮ್ಯಾರಥಾನ್ ಮತ್ತು 21 ಕಿಲೋಮೀಟರ್‌ಗಳ ಅರ್ಧ ಮ್ಯಾರಥಾನ್‌ನಲ್ಲಿ ಓಡುತ್ತಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)