ಮಸ್ಕತ್ (ಒಮಾನ್):
12ನೇ ಶತಮಾನದಲ್ಲಿಯೇ ವಿಶ್ವಕ್ಕೆ ಸಮ ಸಮಾಜದ ಕಲ್ಪನೆಯನ್ನು ನೀಡಿದ ಭಕ್ತ ಬಂಡಾರಿ ಬಸವಣ್ಣ ಪ್ರತಿಪಾದಿಸಿದ ಕಾಯಕ ತತ್ವವನ್ನು ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಮಸ್ಕತ್ ನಗರದ ಕೃಷ್ಣಮಂದಿರ ಸಭಾಂಗಣದಲ್ಲಿ ಏರ್ಪಡಿಸಿದ್ದ 15ನೇ ವಾರ್ಷಿಕ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರ ಭಾಷೆಯಲ್ಲಿಯೇ ಬದುಕಿನ ಸಾರವನ್ನು ವಚನಗಳ ಮೂಲಕ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟ ಬಸವಾದಿ ಶರಣರ ವಿಚಾರಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದರು.
ಬಸವಣ್ಣವರದ್ದು ವೈಜ್ಞಾನಿಕ ತಳಹದಿಯ ಧರ್ಮ. ಇವನಾರವ ಇವನಾರವ ಎಂದೆನಿಸದೇ ಇವನಮ್ಮವ ಇವ ನಮ್ಮವ ಎಂದೆನಿಸಯ್ಯ ಎನ್ನುವುದರಲ್ಲಿಯೇ ಸೌಹಾರ್ದತೆ ಅಡಗಿದೆ. ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ ಎಂದವರು ಬಸವಣ್ಣ. ಇದರ ತತ್ವ ತಿಳಿದು ನಾವುಗಳು ಬದುಕು ಸಾಗಿಸಬೇಕಾಗಿದೆ ಎಂದರು.
ಮರಳುಗಾಡಿನ ಓಮಾನ್ ದೇಶದಲ್ಲಿ ಬಸವ ಬಳಗ ಸ್ಥಾಪನೆ ಮಾಡುವ ಮೂಲಕ ಬಸವ ಧರ್ಮವನ್ನು ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅಲ್ಲಿನ ಕನ್ನಡಿಗರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಭಾರತೀಯ ರಾಯಭಾರಿ ಜಿ.ವಿ.ಶ್ರೀನಿವಾಸ್ ಮಾತನಾಡಿ, 12ನೇ ಶತಮಾನದಲ್ಲಿಯೇ ಜಾತಿ ಪದ್ಧತಿ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ಚೇತನ ಎಂದರು. ನಾಡು ನುಡಿ ಸಂಸ್ಕೃತಿ ಉಳಿಸಿ ಬೆಳಸಿರುವ ನಿಮ್ಮ ದ್ಯೇಯಗಳು ಹೀಗೆ ಮುಂದುವರೆಯಲಿ ಎಂದು ಶಿವನ ಗೀತೆಯನ್ನು ಹಾಡಿದರು.
ಮುಖ್ಯ ಅತಿಥಿಯಾಗಿ ಗುರುವಣ್ಣ ದೇವರಮಠದ ನಂಜುಂಡಸ್ವಾಮಿಜಿ, ಅರಮೇರಿ ಮಠದ ಮಲ್ಲಿಕಾರ್ಜುನ ಸ್ವಾಮಿಜಿ, ಬೇವೂರು ಮಠದ ಮೃತ್ಯುಂಜಯ ಸ್ವಾಮಿಜಿ, ಮಂಜುನಾಥ್ ಸಂಗಾತಿ, ಅಮರೇಶ್ ವೋಟ್ಗಲ್ ಮತ್ತಿತರರು ಹಾಜರಿದ್ದರು.
ಬಸವಣ್ಣನವರ ವಚನಗಳು ಕುರಿತು ಭಾಷಣ, ಹಾಡು, ವಿವಿಧ ನೃತ್ಯ, ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.