ನ್ಯೂಸ್

ಶೌಚಗೃಹದಲ್ಲಿ ನೆಲೆ ಕಂಡುಕೊಂಡಿದ್ದ ವೃದ್ಧೆ, ಮಾನವೀಯತೆ ಮೆರೆದ ಸಾಮಾಜಿಕ ಜಾಲತಾಣದ ತಂಡ

ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆ ಬಾಗೇಪಲ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆಯ ಛಾವಣಿ ಕುಸಿದು ಹಳೇ ಮನೆಯ ಶೌಚಗೃಹದಲ್ಲೇ ಬದುಕು ಸಾಗಿಸುತ್ತಿದ್ದ ವೃದ್ಧೆಗೆ ಸುದ್ದಿಲೋಕ ಹೆಸರಿನ ವಾಟ್ಸ್ಆಪ್ ಗ್ರೂಪ್ ಸ್ನೇಹಿತರ ತಂಡವೊಂದು ದಾನಿಗಳ ನೆರವಿನೊಂದಿಗೆ ಪುಟ್ಟ ಮನೆ ನಿರ್ಮಿಸಿ ಮಾನವೀಯತೆ ಮೆರೆದಿದೆ.
ಬಾಗೇಪಲ್ಲಿ ತಾಲೂಕಿನ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮರೆಡ್ಡಿ ಅವರ ಮನೆ ಮೇಲ್ಛಾವಣಿ ಇತ್ತೀಚೆಗೆ ಸುರಿದ ಮಳೆಯಿಂದ ಮುರಿದು ಬಿದ್ದಿತ್ತು. ಅಂದಿನಿಂದ ವೃದ್ಧೆ ಸೂರಿಲ್ಲದೆ ಪರಿತಪಿಸುತ್ತಿದ್ದರು. ಅಸಹಾಯಕ ವೃದ್ಧೆ ಶೌಚಗೃಹದಲ್ಲಿಯೇ ವಾಸಿಸುತ್ತಿದ್ದರು. ಇದನ್ನು ಗಮನಿಸಿದ ವಾಟ್ಸಾಪ್ ಗ್ರೂಪ್‌ನ ಸದಸ್ಯರು ವೃದ್ಧೆಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿದ ದಾನಿಗಳು ಮತ್ತು ಗ್ರೂಪ್‌ಮ ಸದಸ್ಯರು ಕೈಜೋಡಿಸಿ ಕೈಯಲ್ಲಾದಷ್ಟು ಹಣ ಹೊಂದಿಸಿ ವೃದ್ಧೆಗೆ ಚಿಕ್ಕ ಮನೆ ನಿರ್ಮಿಸಿಕೊಟ್ಟು, ಹಿರಿಯ ಜೀವಕ್ಕೆ ಆಸರೆಯಾಗಿದ್ದಾರೆ. ದಾನಿಗಳಿಂದಲೇ ಸರಳವಾಗಿ ಗೃಹಪ್ರವೇಶ ಕಾರ್ಯ ಮಾಡಿಸಿ ವೃದ್ಧೆಯನ್ನು ಮನೆಗೆ ಸೇರಿಸಿದ್ದಾರೆ.
ಈ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ ಸದಾಶಿವರೆಡ್ಡಿ, ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಪ್ರಶಾಂತ್ ಕುಮಾರ್, ಗ್ರೀನ್ ಇಂಡಿಯಾ ಪೋರಂ ಅಧ್ಯ ಸೈಯದ್ ಸಿದ್ದಿಕ್,  ಮುಖಂಡರಾದ ವೆಂಕಟೇಶ್, ಚಿನ್ನಕಾಯಲಪಲ್ಲಿ ಗಣೇಶ್ ರೆಡ್ಡಿ, ಅಪ್ಪಯ್ಯಬಾಬು, ವೆಂಕಿ, ಆರ್.ಪ್ರತಾಪ್, ವೀರ, ವಿನೋದ್ ಕುಮಾರ್, ಗಿರೀಶ್ ಬಾಬು, ಸುಕುಮಾರ್, ಅತಾವುಲ್ಲ, ಶ್ರೀನಿವಾಸ್, ವೆಂಕಟೇಶ್, ಸಲ್ಮಾನ್ ಮತ್ತಿತರರು ಕೈ ಜೋಡಿಸಿದ್ದಾರೆ.