ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP)ಅನ್ನು ನವೆಂಬರ್ 17ರೊಳಗೆ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಶಾಶ್ವತ ಗುರುತಿನ ಸಂಖ್ಯೆ, ಹಾಲೋಗ್ರಾಮ್ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗೊಂದಿಗೆ ಈ ನಂಬರ್ ಪ್ಲೇಟ್ ಸಿದ್ದಪಡಿಸಲಾಗಿದ್ದು, ಇದನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ. ನವೆಂಬರ್ 17ರ ಒಳಗಾಗಿ ಈ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಕಟ್ಟ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನಂಬರ್ ಪ್ಲೇಟ್ಗಳಲ್ಲಿ ಏಕತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಕುರಿತಾದ ಅಧಿಸೂಚನೆಯನ್ನು ಆಗಸ್ಟ್ 17ರಂದು ಹೊರಡಿಸಲಾಗಿದ್ದು, ವಾಹನ ಮಾಲೀಕರಿಗೆ ನವೆಂಬರ್ 17ರವರೆಗೆ ಗಡುವನ್ನು ನೀಡಲಾಗಿದೆ.
ಇದನ್ನೂ ಓದಿ: ಬ್ಯಾಂಕಿನಿಂದ ಸಾಲ ಪಡೆದ ರೈತರ ಸಮಸ್ಯೆ ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಭೆ: ಸಿಎಂ ಸಿದ್ದರಾಮಯ್ಯ
ಒಂದು ವೇಳೆ ನಿಗದಿತ ವೇಳೆಯಲ್ಲಿ ಮಾಲೀಕರು ಹೊಸ ನಂಬರ್ ಪ್ಲೇಟ್ ಅಳವಡಿಸಲು ವಿಫಲರಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. 500 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಏಪ್ರಿಲ್ 1, 2019ಕ್ಕೂ ಮುನ್ನ ಎರಡು ಕೋಟಿ ವಾಹನಗಳು ನೋಂದಣಿಯಾಗಿವೆ. ಏಪ್ರಿಲ್ 1, 2019ರಿಂದ ಜಾರಿಗೆ ಬರುವಂತೆ HSRP ನಂಬರ್ಪ್ಲೇಟ್ಗಳನ್ನು ಕಡ್ಡಾಯ ಮಾಡಲಾಗಿದೆ.
ವಾಹನ ತಯಾರಕರು ಈ ಪ್ಲೇಟ್‌ಗಳನ್ನು ವಿತರಕರಿಗೆ ಪೂರೈಸಲು ಅಧಿಕೃತ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಳೆಯ ವಾಹನಗಳಿಗೂ ಸಹ HSRP ತಯಾರಕರು ಪ್ಲೇಟ್‌ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ವಾಹನಗಳ ಮಾಲೀಕರು ಅಧಿಕೃತ ಡೀಲರ್‌ಗಳ ಮೂಲಕ HSRP ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು ಎಂದು ತಿಳಿಸಿದ್ದಾರೆ.
ನಾಲ್ಕು ಚಕ್ರದ ವಾಹನಗಳಿಗೆ 400-500 ರೂಪಾಯಿ ದರ ನಿಗದಿ ಮಾಡಲಾಗಿದ್ದು, ದ್ವಿಚಕ್ರ ವಾಹನಗಳಿಗೆ 250-300 ರೂಪಾಯಿ ಇರಲಿದೆ. 12 ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.