ಬೆಂಗಳೂರು: ಕೊರೊನಾ ವೈರಸ್ ಎಂಬ ಮಾರಿ ಇಡೀ ಜಗತ್ತನ್ನು ಬೆಚ್ಚಿ ಬೀಳಿಸುತ್ತಿದೆ. ಈ ಕೊರೊನಾ ವೈರಸ್ ಬಗ್ಗೆ ಹಲವು ಸುಳ್ಳುಸುದ್ದಿಗಳೂ ಹಬ್ಬುತ್ತಿವೆ. ಅದರ ಬೆನ್ನಲ್ಲೇ ಕೆಲವು ಮಾಧ್ಯಮಗಳು ಫ್ಯಾಕ್ಟ್ಚೆಕ್ ಮೂಲಕ ಸತ್ಯಾಂಶಗಳನ್ನು ತಿಳಿಸುತ್ತಿವೆ.
ಈ ಮಧ್ಯೆ ಮೈಮೇಲೆ ಕೂದಲು ಅರ್ಧದಷ್ಟು ಬೋಳಾದ ಕೋಳೆಯೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಫೇಸ್ಬುಕ್ ಬಳಕೆದಾರರಾದ ಸೌರವ್ ಮಂಡಲ್ ಅವರು ಈ ಅನಾರೋಗ್ಯಕರ ಕೋಳಿಯ ಫೋಟೋವನ್ನು ಪೋಸ್ಟ್ ಮಾಡಿ, ಇದು ಕೊರೊನಾ ವೈರಸ್ ಪೀಡಿತ ಕೋಳಿ. ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ದಯವಿಟ್ಟು ಈ ಫೋಟೋವನ್ನು ಎಲ್ಲೆಡೆ ವೈರಲ್ ಮಾಡಿ. ಚಿಕನ್ ಸೇವನೆಯನ್ನು ತಡೆಗಟ್ಟಿ. ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಿ ಎಂದು ಪೋಸ್ಟ್ ಹಾಕಿದ್ದರು.
ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಇದೊಂದು ಸುಳ್ಳು ಸುದ್ದಿ ಎಂಬುದು ಬಯಲಾಗಿದೆ.
ಮೈ ಅರ್ಧ ಬೋಳಾದ ಈ ಕೋಳಿಯ ಚಿತ್ರ ತುಂಬ ಹಳೆಯದು. ನವೆಂಬರ್ ತಿಂಗಳಿಂದ ಅಂದರೆ ಕೊರೊನಾ ವೈರಸ್ ಕಾಣಿಸಿಕೊಳ್ಳುವುದಕ್ಕೂ ಮೊದಲಿನಿಂದಲೇ ಅನಾರೋಗ್ಯಕರ ಕೋಳಿಯ ಚಿತ್ರ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಅಷ್ಟೇ ಅಲ್ಲದೆ ಇದುವರೆಗೆ ಯಾವುದೇ ಪ್ರಾಣಿ, ಪಕ್ಷಿಗಳಿಗೂ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ವಿಶ್ವಸಂಸ್ಥೆ ಮೂಲಗಳು ದೃಢಪಡಿಸಿವೆ.
ಆದರೆ ಮೈನ ಅರ್ಧ ಕೂದಲು ಉದುರಿದ ಕೋಳಿಯ ಚಿತ್ರ 1100 ಬಾರಿ ಶೇರ್ ಆಗಿತ್ತು. ಈ ಫೋಟೋವನ್ನು ರಿವರ್ಸ್ ಸರ್ಚ್ ಇಮೇಜ್ಗೆ ಒಳಪಡಿಸಿದಾಗ ಮೈಮೇಲಿನ ಕೂದಲುಗಳು ಉದುರಿ, ಗುಳ್ಳೆಗಳು ಎದ್ದಿರುವ ಕೋಳಿಯ ಚಿತ್ರ ಕಳೆದ ಮೂರು ತಿಂಗಳಿಂದಲೂ ವೈರಲ್ ಆಗುತ್ತಿದೆ ಎಂಬುದು ಪತ್ತೆಯಾಗಿದೆ.
ಇದೇ ಫೋಟೋವನ್ನು ಬಳಸಿಕೊಂಡು 2019ರ ನವೆಂಬರ್ನಲ್ಲಿ ತಮಿಳ್ 369 ನ್ಯೂಸ್ನಲ್ಲಿ ಆರ್ಟಿಕಲ್ವೊಂದು ಪ್ರಕಟಗೊಂಡಿದೆ.
ಅಡುಗೆಗೆ ಬಳಸುವ ಚಿಕನ್ಗಳಿಗೆ ರಾಸಾಯನಿಕಗಳಿಂದ ಇಂಜೆಕ್ಟ್ ಮಾಡಲಾಗುತ್ತದೆ. ಹಾಗಾಗೇ ಅವು ಬಹುಬೇಗನೇ ದೊಡ್ಡದಾಗಿ ಬೆಳೆಯುತ್ತವೆ. ಅದರಿಂದ ನಮ್ಮ ದೇಹಕ್ಕೂ ಸೈಡ್ ಎಫೆಕ್ಟ್ಗಳಿವೆ ಎಂಬುದರ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ ಹೊರತು ಕೊರೊನಾ ವೈರಸ್ ಬಗ್ಗೆ ಉಲ್ಲೇಖವಿಲ್ಲ ಎಂಬುದು ಫ್ಯಾಕ್ಟ್ಚೆಕ್ನಲ್ಲಿ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ ಇಂಡಿಯಾ ಟುಡೇ ತಂಡ ಡಾ. ಜಿ.ದೇವೇಗೌಡ ಅವರನ್ನು ಕೋಳಿ ಉದ್ಯಮದ ಪಶುವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಜಿ.ದೇವೇಗೌಡ ಅವರನ್ನು ಇಂಡಿಯಾ ಟುಡೇ ತಂಡ ಸಂಪರ್ಕಿಸಿ ಪ್ರಶ್ನೆ ಮಾಡಿದಾಗ ಅವರೂ ಕೂಡ ಇದುವರೆಗೆ ಕೊರೊನಾ ವೈರಸ್ ಪೀಡಿತ ಕೋಳಿ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)