ನ್ಯೂಸ್

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಅಗತ್ಯ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

Chikkaballapur

ಚಿಕ್ಕಬಳ್ಳಾಪುರ : ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಮತ್ತಷ್ಟು ಪ್ರಬಲ ಸಂಘಟನೆಯಾಗಬೇಕಿದ್ದು ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಒಂದು ಕಡೆ ಮಾತ್ರ ಪಕ್ಷದ ಶಾಸಕರಿದ್ದಾರೆ. ಇನ್ನು ನೆರೆಹೊರೆಯ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಬ್ಬರೂ ಶಾಸಕರಿಲ್ಲ. ಇಲ್ಲೂ ಸಹ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಕಾಣಬೇಕಾಗಿದೆ. ಮುಖ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದರು.

ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ಪಕ್ಷ ಸಿದ್ಧವಾಗಬೇಕು. ಇಲ್ಲಿನ ಜಿಪಂ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಿದೆ. ಇದಕ್ಕಾಗಿ ಸೂಕ್ತ ಯೋಜನೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅನುಷ್ಠಾನ ಸೇರಿ ಹಲವು ವಿಚಾರಗಳ ಬಗ್ಗೆ ಪದಾಧಿಕಾರಿಗಳು ಚರ್ಚಿಸಬೇಕು ಎಂದು ತಿಳಿಸಿದರು.

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ 27 ಮಂದಿ ಒಬಿಸಿ, 20 ಎಸ್ಸಿ, ಎಸ್ಟಿ ವರ್ಗದವರಿಗೆ ಅವಕಾಶ ನೀಡಲಾಗಿದೆ. ಅಲ್ಪಸಂಖ್ಯಾತರಿಗೂ ಆದ್ಯತೆ ಸಿಕ್ಕಿದೆ. ಸಚಿವ ಸಂಪುಟದಲ್ಲಿ 11 ಮಹಿಳೆಯರೂ ಇದ್ದಾರೆ. ಇದು ನಿಜವಾದ ಸಾಮಾಜಿಕ ನ್ಯಾಯ. ಇದಂತೂ ಕಾಂಗ್ರೆಸ್‌ನಲ್ಲಿ ಇಲ್ಲ. ಇದನ್ನು ಟೀಕಾಕಾರು ಅರ್ಥ ಮಾಡಿಕೊಳ್ಳಬೇಕು ಎಂದರು.

ಹೆಪಟೈಟಿಸ್-ಬಿ ಲಸಿಕೆ ಆವಿಷ್ಕಾರವಾದ ಬಳಿಕ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಆದರೆ, ಕರೊನಾ ಲಸಿಕೆ ದೇಶದಲ್ಲೇ ತಯಾರಾಗಿ ಬೇಗ ಬಳಕೆಗೆ ಬಂತು. ಬೇರೆ ದೇಶಗಳಿಗಿಂತ ಹೆಚ್ಚು ಲಸಿಕೆಯನ್ನು ವೇಗವಾಗಿ ನೀಡಲಾಗಿದೆ. ರಾಜ್ಯದಲ್ಲಿ 2.50 ಕೋಟಿಗೂ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿಯೇ ಕಾರಣ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಮಲಿಂಗಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಜನಪರ ಉತ್ತಮ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಕಾರರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ, ಕಾರ್ಮಿಕರಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ. ಕರೊನಾ ಸಂದಿಗ್ಧ ಸ್ಥಿತಿಯಲ್ಲೂ ಕಾಂಗ್ರೆಸ್ ರಚನಾತ್ಮಕವಾಗಿ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಕೇಶವ ಪ್ರಸಾದ್, ವಿಭಾಗ ಸಂಘಟನಾ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಉಸ್ತುವಾರಿ ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಮರಳುಕುಂಟೆ ಕೃಷ್ಣಮೂರ್ತಿ, ಮುರಳೀಧರ್, ಅರುಣ್ ಬಾಬು ಕಾರ್ಯದರ್ಶಿ ಆರ್.ಎನ್.ಅಶೋಕ್, ಮಿಟ್ಟಹಳ್ಳಿ ಮಂಜುನಾಥ್, ವಕ್ತಾರ ರಮೇಶ್ ಬಾಯಿರಿ. ಕಾರ್ಯಾಲಯದ ಕಾರ್ಯದರ್ಶಿ ಲಕ್ಷ್ಮೀಪತಿ ಮತ್ತಿತರರು ಇದ್ದರು.

ಪರಿಕರ, ನೆರವಿನ ಹಣ ವಿತರಣೆ : ತಾಲೂಕಿನ ದಿಬ್ಬೂರು ಗ್ರಾಪಂ ಕಚೇರಿ ಆವರಣದಲ್ಲಿ ಕಸ ಸಂಗ್ರಹ ವಾಹನಕ್ಕೆ ಸಚಿವರು ಚಾಲನೆ ನೀಡಿದರು. ಮಂಚನಬಲೆಯಲ್ಲಿ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಬಡವರಿಗೆ ದಿನಸಿ ಕಿಟ್, ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ನೆರವು, ಮರಸನಹಳ್ಳಿಯಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ 66 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದರು. ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭಾ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮಸ್ವಾಮಿ, ಮೋಹನ್ ಮತ್ತಿತರರು ಇದ್ದರು.

ವೈರಸ್‌ಗಳ ಅಧ್ಯಯನ : ವಿಜ್ಞಾನಿಗಳ 9 ತಿಂಗಳ ವೈಜ್ಞಾನಿಕ ದತ್ತಾಂಶದಿಂದ ಕೋವಿಶೀಲ್ಡ್ ಮೊದಲ ಲಸಿಕೆಯನ್ನು ಪಡೆದ 12 ರಿಂದ 16 ವಾರಗಳ ಬಳಿಕ ಎರಡನೇ ಡೋಸ್ ಪಡೆದರೆ ಒಳ್ಳೆಯ ಪರಿಣಾಮಕಾರಿ ಎನ್ನುವುದು ತಿಳಿದು ಬಂದಿದೆ ಎಂದು ಸಚಿವ ಡಾ ಕೆ.ಸುಧಾಕರ್ ತಿಳಿಸಿದ್ದಾರೆ.

ಕರೊನಾ ನಾನಾ ತಳಿ ವೈರಸ್‌ಗಳು, ಸೋಂಕಿನ ನಿಯಂತ್ರಣಕ್ಕೆ ಕಂಡು ಹಿಡಿದು ಲಸಿಕೆಗಳ ಪರಿಣಾಮ ಅಧ್ಯಯನ ನಡೆಯುತ್ತಿದೆ ಎಂದರು.