ನ್ಯೂಸ್

ಬೆಂಗಳೂರಿನಲ್ಲಿ ಓಲಾ​ ಇಂಜಿನಿಯರ್ ಆತ್ಮಹತ್ಯೆ; ಸಿಇಒ ಭವಿಷ್ ಅಗರ್ವಾಲ್ ಸೇರಿ ಅಡಳಿತಾಧಿಕಾರಿಗಳ ವಿರುದ್ಧ ಎಫ್​ಐಆರ್| Ola Engineer Suicide

ಬೆಂಗಳೂರು: ಓಲಾ ಎಲೆಕ್ಟ್ರಿಕ್ಸ್ ಕಂಪನಿಯ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್(Ola Engineer Suicide) ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ 28 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದು, ಈ ಸಂಬಂಧ ಸಿಒಇ ಭವಿಷ್ ಅಗರ್ವಾಲ್ ಸೇರಿ ಕಂಪನಿಯ ಆಡಳಿತಾಧಿಕಾರಿಗಳ ವಿರುದ್ದ ಅ. 06ರಂದು ಎಫ್​ಐಆರ್ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

2022ರಿಂದ ಓಲಾದಲ್ಲಿ ಹೋಮೋಲೋಗೇಶನ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಕೆ. ಅರವಿಂದ್ ಸೆ. 28ರಂದು ಬೆಂಗಳೂರಿನ ಚಿಕ್ಕಲ್ಲಸಂದ್ರದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿದ್ದರು. ತಕ್ಷಣವೇ ಸ್ನೇಹಿತರು ಅವರನ್ನು ಮಹಾರಾಜ ಅಗ್ರಸೇನಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅಂದೇ ನಿಧನರಾಗಿದ್ದರು. ಇನ್ನು ಸಾವಿನ ಬಗ್ಗೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು ಎಂದು ಎನ್ನಲಾಗಿದೆ.

ಮೃತ ಅರವಿಂದ್​ ಸಹೋದರನಿಂದ ದೂರು

ಅರವಿಂದ್ ಮೃತರಾದ ಸ್ವಲ್ಪ ದಿನಗಳ ಬಳಿಕ ಅವರ ಸಹೋದರನಿಗೆ ಮನೆಯಲ್ಲಿ 28 ಪುಟಗಳ ಡೆತ್​ನೋಟ್ ಸಿಕ್ಕಿದೆ.  ಅದರಲ್ಲಿ ಓಲಾ ಎಂಜಿನಿಯರ್ ಸುಬ್ರತ್ ಕುಮಾರ್ ದಾಸ್ ಮತ್ತು ಭವಿಶ್ ಅಗರ್ವಾಲ್ ವಿರುದ್ಧ ಕೆಲಸದ ಸ್ಥಳದಲ್ಲಿ ಕಿರುಕುಳ ಮತ್ತು ಒತ್ತಡದ ಆರೋಪ, ಮಾನಸಿಕವಾಗಿ ಹಿಂಸಿಸಲಾಗಿದ್ದು, ಸಂಬಳ ಮತ್ತು ಭತ್ಯೆಗಳನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಅರವಿಂದ್ ಸಹೋದರ ಸಹ ಈ ಕುರಿತು ಮಾತನಾಡಿದ್ದು, ಅರವಿಂದ್ ಸಾವನ್ನಪ್ಪಿದ ಎರಡು ದಿನಗಳ ನಂತರ NEFT ಮೂಲಕ ಅವರ ಖಾತೆಗೆ 17,46,313 ರೂ.ಗಳ ಅನುಮಾನಾಸ್ಪದವಾಗಿ ವರ್ಗಾವಣೆ ಮಾಡಲಾಗಿದೆ. ಇನ್ನೂ ಈ ವ್ಯವಹಾರದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಓಲಾವನ್ನು ಸಂಪರ್ಕಿಸಿದಾಗ ಸುಬ್ರತ್ ಕುಮಾರ್ ದಾಸ್ ಅಸ್ಪಷ್ಟ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಂಪನಿಯ ಮೂವರು ಪ್ರತಿನಿಧಿಗಳಾದ ಕ್ರತೇಶ್ ದೇಸಾಯಿ, ಪರಮೇಶ್ ಹಾಗೂ ರೋಶನ್ ಅರವಿಂದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ ಹಣಕಾಸಿನ ವರ್ಗಾವಣೆಯ ಬಗ್ಗೆ ಯಾವುದೇ ಸ್ಥಿರ ಮಾಹಿತಿಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.

ಅ. 06ರಂದು ಮೃತ ಅರವಿಂದ್ ಸಹೋದರ ಓಲಾ ಸಿಇಒ ಭವಿಶ್ ಅಗರ್ವಾಲ್, ಸುಬ್ರತ್ ಕುಮಾರ್ ದಾಸ್ ಸೇರಿ ಆಡಳಿತಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಅರವಿಂದ್ ಸಾವಿಗೆ ಅವರ ಮೇಲಧಿಕಾರಿಗಳಿಂದ ನಿರಂತರ ಕಿರುಕುಳ, ಅವಮಾನ ಮತ್ತು ಆರ್ಥಿಕ ಶೋಷಣೆ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದು,  ದಾಸ್, ಅಗರ್ವಾಲ್ ಸೇರಿದಂತೆ ಆರೋಪಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಓಲಾ ಕಂಪನಿ ಹೇಳಿದ್ದೇನು?

ಇಂಜಿನಿಯರ್ ಅರವಿಂದ್ ಸಾವಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಓಲಾ ಕಂಪನಿ, ನಮ್ಮ ಸಹೋದ್ಯೋಗಿ ಅರವಿಂದ್ ಅವರ ಸಾವು ದುರದೃಷ್ಟಕರ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ಕಂಪನಿ ನಿಲ್ಲುತ್ತದೆ. ಅರವಿಂದ್ ಅವರು ಮೂರುವರೆ ವರ್ಷಗಳಿಗೂ ಹೆಚ್ಚು ಕಾಲ ಓಲಾ ಎಲೆಕ್ಟ್ರಿಕ್‌ನೊಂದಿಗೆ ಸಂಬಂಧ ಹೊಂದಿದ್ದರು. ಬೆಂಗಳೂರಿನಲ್ಲಿರುವ ನಮ್ಮ ಪ್ರಧಾನ ಕಚೇರಿಯಲ್ಲಿ ನೆಲೆಸಿದ್ದರು. ಅವರ ಅಧಿಕಾರಾವಧಿಯಲ್ಲಿ ತಮ್ಮ ಉದ್ಯೋಗ ಅಥವಾ ಯಾವುದೇ ಕಿರುಕುಳದ ಬಗ್ಗೆ ಅರವಿಂದ್ ಅವರು ಯಾವುದೇ ದೂರು ಅಥವಾ  ಸಮಸ್ಯೆಗಳನ್ನು ಎತ್ತಲಿಲ್ಲ. ಮತ್ತೆ ಆಡಳಿತ ಮಂಡಳಿಯೊಂದಿಗೆ ನೇರ ಮಾತುಕತೆಯ ಸಂಬಂಧವನ್ನು ಒಳಗೊಂಡಿರಲಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)