ನ್ಯೂಸ್

ದೇಶದಲ್ಲಿ ತೈಲ ಬೆಲೆ ಭಾರಿ ಏರಿಕೆ ಸಾಧ್ಯತೆ

ನವದೆಹಲಿ: ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದರ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿರುವ ಮತ್ತು ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳಿಗೆ ಶೇ. 100ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಘೊಷಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಉಂಟಾಗಿದೆ.

ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರ ದೇಶಗಳಲ್ಲಿ ಭಾರತವೂ ಒಂದು ಈ ಕ್ರಮಗಳು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರಲಿವೆ. ಟ್ರಂಪ್ ಕ್ರಮದಿಂದಾಗಿ ರಷ್ಯಾದ 5 ದಶಲಕ್ಷ ಬ್ಯಾರೆಲ್ ದೈನಂದಿನ ತೈಲ ರಫ್ತಿನಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದ್ದು, ಅದು ನಿಜವಾದರೆ ಕಚ್ಚಾ ತೈಲದ ಬೆಲೆ ಬ್ಯಾರೆಲ್​ಗೆ 100-120 ಡಾಲರ್​ಗೆ ಏರಿಕೆಯಾಗಬಹುದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಭಾರತ ತನಗೆ ಅಗತ್ಯವಿರುವ ಇಂಧನದ ಪೈಕಿ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆಯಾದರೆ, ಸಾರ್ವಜನಿಕರ ಇಂಧನ ವೆಚ್ಚದಲ್ಲಿ ಭಾರಿ ಏರಿಕೆ ಆಗಬಹುದು. ರಷ್ಯಾದಿಂದ ಭಾರತ ತನ್ನ ಕಚ್ಚಾ ತೈಲ ಅಗತ್ಯದ ಶೇ. 35-40ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದು ಯೂಕ್ರೇನ್ ಯುದ್ಧದ ನಂತರ ರಿಯಾಯಿತಿ ದರದಲ್ಲಿ ಲಭ್ಯವಾಗಿತ್ತು. ಐರೋಪ್ಯ ಒಕ್ಕೂಟದ ಕೆಲವು ದೇಶಗಳು ರಷ್ಯಾದ ತೈಲವನ್ನು ಪರೋಕ್ಷವಾಗಿ (ಬೇರೆ ದೇಶಗಳ ಹೆಸರಿನಲ್ಲಿ) ಆಮದು ಮಾಡಿಕೊಳ್ಳುತ್ತಿವೆ. ಆದರೆ ಅದರಿಂದಲೂ ಕಚ್ಚಾ ತೈಲದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತದೆ. ಭಾರತ ಸುಮಾರು 40ಕ್ಕೂ ಹೆಚ್ಚು ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಪೂರೈಕೆ ಕೊರತೆಯ ಭಯ ಕಡಿಮೆ ಎಂದು ಇನ್ನು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.