ತೀರ್ಥಹಳ್ಳಿ: ಗೋಕಳ್ಳರ ಜತೆಗೆ ತಾಲೂಕಿನ ಪಶು ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಿಂದುಗಳು ಗೋವುಗಳನ್ನು ದೇವರ ರೂಪ ಎಂದು ಪೂಜಿಸುತ್ತೇವೆ. ಆದರೆ ಅವುಗಳನ್ನು ಹತ್ಯೆ ಮಾಡಿ ಮಾಂಸ ಸೇವಿಸುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ತಾಲೂಕಿನಲ್ಲಿ ಗೋವುಗಳ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಕಳ್ಳರ ಜತೆ ಶಾಮೀಲಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಧರ್ಮಸ್ಥಳ ಮತ್ತು ಮದ್ದೂರು ಘಟನೆಗಳು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಸಂತೋಷ್ ಪೂಜಾರಿ, ಮಹಾಂತ ಗೌಡ, ಚೇತನ್, ಪ್ರದೀಪ್ ಶೆಟ್ಟಿ, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್ ಇದ್ದರು.