ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ತಾಂತ್ರಿಕವಾಗಿ ಮತ್ತಷ್ಟು ಸಶಕ್ತರಾಗಬೇಕು ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಹೇಳಿದರು.
ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಲೋಕಾಯುಕ್ತ ಪೊಲೀಸರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಲೋಕಾಯುಕ್ತದಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ನೌಕರರು ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು. ಸಂಸ್ಥೆಯ ಕಾರ್ಯಾವ್ಯಾಪ್ತಿ ಮತ್ತು ಕಾರ್ಯವಿಧಾನದ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ಲೋಕಾಯುಕ್ತ ಎಂಬುದು ವಿಶೇಷ ತನಿಖಾ ಸಂಸ್ಥೆಯಾಗಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಷ ಕೌಶಲ್ಯ ಹಾಗೂ ವಿಶೇಷ ಜ್ಞಾನಾರ್ಜನೆ ವೃದ್ದಿಸಿಕೊಂಡು ಭ್ರಷ್ಟಾಚಾರ ಪತಿಬಂಧ ಅಧಿನಿಯಮ (ಪಿಸಿ ಆಕ್ಟ್) ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಕಾನೂನಿನ ನಿಬಂಧನೆಯೊಳಗೆ ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಹಿಂದಿನ ಎಸಿಬಿ ಹಾಗೂ ಪ್ರಸ್ತುತ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವೇಳೆ ಅತಿಯಾದ ಆತ್ಮವಿಶ್ವಾಸವನ್ನಾಗಲಿ, ಹೊಸದಾಗಿ ನೇಮಕಗೊಂಡಿರುವವರು ನಾವು ಕಡಿಮೆ ತಿಳುವಳಿಕೆವುಳ್ಳವರಾಗಿದ್ದೇವೆ ಎಂಬ ಯಾವುದೇ ಕೀಳರಿಮೆ ಬೆಳೆಸಿಕೊಳ್ಳುವುದರ ಅಗತ್ಯವಿರುವುದಿಲ್ಲ ಎಂದರು.
ಮೂರು ದಿನಗಳ ಕಾರ್ಯಾಗಾರದಲ್ಲಿ ಪರಿಣಿತರು ಹಾಗೂ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾರ್ಗದರ್ಶನಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ತಮ್ಮ ದೈನಂದಿನ ಕರ್ತವ್ಯಗಳಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ತನಿಖೆ ಮಾಡುವಾಗ ಆಗುವಂತಹ ತಪ್ಪುಗಳು ಬಗ್ಗೆ ಮತ್ತು ತನಿಖೆ ವೇಳೆ ಲೋಪದೋಷಗಳು ಆಗದಂತೆ ಮುಂದೆ ಯಾವ ರೀತಿ ಎಚ್ಚರ ವಹಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ತರಬೇತಿಯನ್ನು ಪರಿಣಿತರಿಂದ ಕೋಡಿಸಲಾಗುತ್ತಿದೆ ಎಂದರು.
ತಂತ್ರಜ್ಞಾನಗಳು ಹೆಚ್ಚು ಆವಿಸ್ಕಾರಗಳು ಆಗುತ್ತಿದಂತೆ ಅಪರಾಧಗಳ ಸ್ವರೂಪಗಳು ಕೂಡ ಬದಲಾಗುತ್ತಿದೆ. ಬಿಟ್‌ಕಾಯಿನ್, ಡಾರ್ಕ್‌ವೆಬ್, ಮನಿಲ್ಯಾಂಡ್ರಿಂಗ್‌ಗಳಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಅವುಗಳನ್ನು ಯಾವ ರೀತಿ ತಾಂತ್ರಿಕವಾಗಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಸಿಬಿ ಅಧಿಕಾರಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಒಟ್ಟಾರೆ ತಾಂತ್ರಿಕವಾಗಿ ಅಧಿಕಾರಿಗಳನ್ನು ಮತ್ತಷ್ಟು ಸಶಕ್ತರನ್ನಾಗಿ ಮಾಡುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಇನ್ನು ಆರೋಪಿತರ ಖಾತೆಗಳನ್ನು ಜಪ್ತಿ ಮಾಡಿದ್ದಾಗ ಅದನ್ನು ಯಾವ ರೀತಿ ಲೆಕ್ಕಚಾರ ಹಾಕಬೇಕು ಎಂಬುದನ್ನು ಚಾರ್ಟೆಡ್ ಅಕೌಂಟೆಟ್‌ಗಳಿಂದ (ಸಿಎ) ತರಬೇತಿ ನೀಡಲಾಗುತ್ತಿದೆ. ಜತೆಗೆ ತಾಂತ್ರಿಕವಾಗಿ ಇರುವಂತಹ ಸಾಕ್ಷ್ಯಗಳನ್ನು ದೀರ್ಘಕಾಲದವರೆಗೂ ರಕ್ಷಣೆ ಮಾಡುವುದು ಹೇಗೆ ಎಂಬಿತ್ಯಾದಿ ತರಬೇತಿಯನ್ನು ಅಧಿಕಾರಿಗಳಿಗೆ ಕೊಡಿಸಲಾಗುತ್ತಿದೆ. ಲೋಕಾಯುಕ್ತಕ್ಕೆ ಹಲವು ಹೊಸ ಪೊಲೀಸ್ ಅಧಿಕಾರಿಗಳು ಬಂದಿದ್ದು ಅವರಿಗೆಲ್ಲಾ ತರಬೇತಿಯ ಅವಶ್ಯಕತೆ ಇದೆ. ಜ್ಯುಡಿಷಿಯಲ್ ಅಕಾಡೆಮಿಯಿಂದ ಪರಿಣಿತರನ್ನು ಕರೆಸಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಣೀಂದ್ರ, ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಐಜಿಪಿ ಸುಬ್ರಹ್ಮಣ್ಯೇಶ್ವರರಾವ್ ಮತ್ತು ನಿಬಂಧಕರಾದ ಉಷಾರಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.