ಮೂಡಲಗಿ ಪಟ್ಟಣದಲ್ಲಿ ಪ್ರವಾಹ, ಅತಿವೃಷ್ಟಿ ಮನ್ನೆಚ್ಚರಿಕಾ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿಪತ್ತು ನಿರ್ವಹಣಾ ಜಿಲ್ಲಾಮಟ್ಟದ ನೋಡಲ್ ಅಧಿಕಾರಿ ನಾಗರಾಜ ಆರ್. ಮಾತನಾಡಿದರು. ಅಜಿತ ಮನ್ನಿಕೇರಿ, ಶಿವಾನಂದ ಬಬಲಿ, ನವೀನಪ್ರಸಾದ ಕಟ್ಟಿಮನಿ, ಬಸವರಾಜ ಕಾಮಬೈಲ್ ಇತರರಿದ್ದರು. 
ನ್ಯೂಸ್

ಅಧಿಕಾರಿಗಳೇ ನೆರೆ ಎದುರಿಸಲು ಸಿದ್ಧರಾಗಿ

ಮೂಡಲಗಿ: ಮೂಡಲಗಿ ತಾಲೂಕಿನಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಕೇಂದ್ರಸ್ಥಳದಲ್ಲಿ ಇದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಿಪತ್ತು ನಿರ್ವಹಣಾ ಜಿಲ್ಲಾಮಟ್ಟದ ನೋಡಲ್ ಅಧಿಕಾರಿ ನಾಗರಾಜ ಆರ್. ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ತಾಲೂಕಿನ ಪ್ರಸಕ್ತ ಸಾಲಿನಲ್ಲಿ ಪ್ರವಾಹ, ಅತಿವೃಷ್ಟಿ, ಬರ ಪರಿಸ್ಥಿತಿ ಎದುರಿಸುವ ಮನ್ನೆಚ್ಚರಿಕಾ ಕ್ರಮಗಳ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಜಿಲ್ಲಾಡಳಿತ ಜನರೊಂದಿಗೆ ಇದೆ ಎಂಬ ಭರವಸೆ ಬರುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.

ತಾಲೂಕಿನ ಗ್ರಾಮ ಆಡಳಿತಗಾರರು ಮತ್ತು ಗ್ರಾಪಂ ಅಭಿವದ್ಧಿ ಅಧಿಕಾರಿಗಳು ಪ್ರತಿಯೊಂದು ಗ್ರಾಮದ ಮುಖಂಡರು, ಹಿರಿಯರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡು ಸಭೆ ನಡೆಸಿ ವರದಿ ಸಲ್ಲಿಸಬೇಕು, ಶಿಥಿಲ ವ್ಯವಸ್ಥೆಯ ಮನೆಗಳ ಸರ್ವೇ ಮಾಡಬೇಕು. ಹೆಸ್ಕಾಂ ಅಧಿಕಾರಿಗಳು ಅಪಾಯವಿರುವ ಕಂಬ ಮತ್ತು ಟಿಸಿಗಳನ್ನು ಬದಲಾಯಿಸಬೇಕು.

ಆರೋಗ್ಯ ಇಲಾಖೆ ಔಷಧಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು-ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಪಾಯದ ಮರಗಳನ್ನು ಗುರುತಿಸಿ ತೆಗೆಯಬೇಕು. ಪ್ರವಾಹ ಬಂದ ಸಂದರ್ಭದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಕಾಟಾಚಾರಕ್ಕೆ ಗಂಜಿ ಮಾತ್ರ ನೀಡಬಾರದು. ಪ್ರೋಟಿನ್‌ಯುಕ್ತ ಆಹಾರ ಪೂರೈಸಬೇಕು. ತಾಲೂಕಾಡಳಿತ ಪ್ರವಾಹದ ಮಾರ್ಗಸೂಚಿಯನ್ನು ತಯಾರಿಸಿ ಮಸಗುಪ್ಪಿ, ಹುಣಶ್ಯಾಳ ಪಿಜಿ, ಢವಳೇಶ್ವರ ಸೇರಿ ಘಟಪ್ರಭಾ ನದಿ ದಡ್ಡದಲ್ಲಿನ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳಬೇಕು ಎಂದರು.

ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ತಾಲೂಕಿನ ಎಲ್ಲ ಇಲಾಖೆಯವರು ಕೂಡಿ ಕೆಲಸ ಮಾಡಿ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗೋಣ. ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸೌಕರ್ಯ ಒದಗಿಸುವುದಾಗಿ ತಿಳಿಸಿದರು.

ಗ್ರೇಡ್-2 ತಹಸೀಲ್ದಾರ್ ಶಿವಾನಂದ ಬಬಲಿ, ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಘಟಪ್ರಭಾ ಸಿಪಿಐ ಬಸವರಾಜ ಕಾಮಬೈಲ್, ಸಿಡಿಪಿಒ ಯಲ್ಲಪ್ಪ ಗದಾಡಿ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗನವರ, ಮಲ್ಲಿಕಾರ್ಜುನ ಜಾಣಮಟ್ಟಿ, ಪಿಎಸ್‌ಐ ಚಂದ್ರಶೇಖರ ಹೆರಕಲ್‌ಲ್, ಮಹಾಂತೇಶ ಹಿರೇಮಠ, ಡಾ.ಎಂ.ಬಿ.ಹೊಸುರ, ಶಿರಸ್ತೇದಾರ ಪರಶುರಾಮ ನಾಯ್ಕ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಇದ್ದರು.