ನ್ಯೂಸ್

ಬಾಲ್ಯವಿವಾಹ ತಡೆಗೆ ಜಾಗೃ ಸಭೆ ನಡೆಸಿ

ಚಿಕ್ಕಮಗಳೂರು: ಬಾಲ್ಯವಿವಾಹ ತಡೆಯುವ ಉದ್ದೇಶದಿಂದ ಗ್ರಾಪಂ ಮಟ್ಟದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಹಾಗೂ ಸಖಿ, ಬಾಲ್ಯ ವಿವಾಹ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಯಲ್ಲಿ ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಒಟ್ಟು 5,455 ಫಲಾನುಭವಿಗಳ ಖಾತೆಗೆ ಮೂರು ಕಂತುಗಳಲ್ಲಿ 5 ಸಾವಿರ ರೂ. ಸಹಾಯಧನ ನೀಡಲಾಗಿದೆ. ಅರ್ಹರನ್ನು ಗುರುತಿಸಿ ಸವಲತ್ತು ತಲುಪಿಸಲು ಅಧಿಕಾರಿಗಳು ಮಂದಾಗಬೇಕು ಎಂದರು.

ಬಾಲ್ಯವಿವಾಹ ತಡೆಯಲು ಸರ್ಕಾರ ಸಹಾಯವಾಣಿ ಸಂಖ್ಯೆ 1098ನ್ನು ಜಾರಿಗೆ ತಂದಿದೆ. ಇದು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಪ್ರಸ್ತುತ ಬಂದಿರುವ ಕರೆಗಳು, ಅವುಗಳಲ್ಲಿ ಕ್ರಮ ಕೈಗೊಂಡಿರುವ ಪ್ರಕರಣಗಳೆಷ್ಟು? ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಪಡೆದರು.