ನ್ಯೂಸ್

ಮೂಗೂರಿನಲ್ಲಿ ಮುತ್ತೈದೆಯರಿಂದ ಬಾಗಿನ ಅರ್ಪಣೆ

ಮೂಗೂರು: ಶ್ರೀ ಗೌರಿ-ಗಣೇಶ ಹಬ್ಬದ ಅಂಗವಾಗಿ ಗ್ರಾಮದ ಶ್ರೀ ಸ್ವರ್ಣಗೌರಿ ಪ್ರತಿಷ್ಠಾಪನೆ ಕಾರ್ಯಕ್ರಮ (ಗೌರಿ ಗುಡಿ) ದೇವಾಲಯದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಸುಮಾರು ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಗ್ರಾಮದ ವರ್ತಕರ ಸಮುದಾಯ ವತಿಯಿಂದ ನಿರಂತರವಾಗಿ ಸ್ವರ್ಣಗೌರಿ ಅಮ್ಮನವರ ಪೂಜೆಯ ಆಚರಣೆಯನ್ನು ಸಾಂಪ್ರದಾಯಿಕವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಶೆಟ್ಟರ ಮುಖ್ಯಸ್ಥರ ಮನೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮೊದಲಿಗೆ ಸ್ವರ್ಣಗೌರಿ ಅಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಗೌರಿಗುಡಿಯ ದೇಗುಲಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಅಮ್ಮನವರಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ದೇವಾಲಯದಲ್ಲಿ ಮುತ್ತೈದೆಯರು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಅಮ್ಮನವರ ಭಕ್ತರ ಸಮೂಹ ಅಪಾರವಾಗಿದ್ದು 9 ದಿನಗಳವರೆಗೆ ಬೆಳಗ್ಗೆಯಿಂದ ಸಂಜೆ ತನಕ ವಿಶೇಷ ಪೂಜೆಗಳು ಜರುಗಲಿವೆ. ಶ್ರೀ ಸ್ವರ್ಣಗೌರಿ ಭಕ್ತ ಮಂಡಳಿ ಹಾಗೂ ಸ್ಥಳೀಯ ಸೇವಾರ್ಥದಾರರಿಂದ 9 ದಿನಗಳವರೆಗೆ ಸಂಜೆ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜೆ ನೆರವೇರಲಿದೆ.