ಕಳಸ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣೈಶ್ವರ ದೇವಾಸ್ಥಾನದ ನಾಗ ಬನದಲ್ಲಿ ನಾಗದೇವರಿಗೆ ಅಭಿಷೇಕ ಮಾಡುತ್ತಿರುವುದು. 
ನ್ಯೂಸ್

ನಾಗ ಶಿಲೆಗಳಿಗೆ ಹಾಲು, ಎಳೆನೀರು ಅರ್ಪಣೆ

ಕಳಸ: ಕಳಸ ತಾಲೂಕಿನಾದ್ಯಂತ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಾಗದೇವರ ದೇವಸ್ಥಾನ ಎಂದು ಪ್ರಸಿದ್ದಿ ಪಡೆದ ಭದ್ರಾ ನದಿಯ ದಡದಲ್ಲಿ ನೆಲೆನಿಂತ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣೈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿದ್ದರು.
ದೇವಸ್ಥಾನದ ನಾಗಬನಕ್ಕೆ ಭೇಟಿ ನೀಡಿ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ನಾಗ ಶಿಲೆಗಳಿಗೆ ಹಾಲು, ಎಳೆನೀರು ಅರ್ಪಿಸಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ತಾವು ಕಷ್ಟಕಾಲಕ್ಕೆ ಹೇಳಿಕೊಂಡ ಹರಕೆಯಂತೆ ಬೆಳ್ಳಿ ಹಾವಿನ ಹೆಡೆ,ಮೊಟ್ಟೆ, ನರ, ತೊಟ್ಟಿಲು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ದೇವರಿಗೆ ಸಲ್ಲಿಸಿ ಪೂಜಾ ವಿಧಾನಗಳನ್ನು ನೆರವೇರಿಸಿಕೊಂಡರು.
ತಾಲೂಕಿನ ಹೊರನಾಡು, ಬಾಳೆಹೊಳೆ, ಹಿರೇಬೈಲು, ಸಂಸೆ, ಮರಸಣಿಗೆ, ಕಳಸ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ನಾಗರ ಪಂಚಮಿ ಅಂಗವಾಗಿ ಕಲಶೇಶ್ವರ ದೇವಸ್ಥಾನದ ನಾಗ ಬನದಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಗ ಶಿಲೆಗೆ ಹಾಲೆರೆದು ಪುನೀತರಾದರು.
ಇನ್ನು ಕೆಲವೆಡೆ ನಾಗಬನವಿರುವ ಕುಟುಂಬದ ಮನೆ ಮನೆಗಳಲ್ಲೂ ನಾಗನ ಶಿಲೆಗೆ ಕುಟುಂಬಸ್ಥರು ಸೇರಿ ಹಾಲೆರೆದು ನಾಗದೋಷ ನಿವಾರಣೆಗಾಗಿ ಎಂದು ಪ್ರಾರ್ಥಿಸಿದರು.