ನ್ಯೂಸ್

ಪುಷ್ಪ ಸಮರ್ಪಣೆಯಿಂದ ಅನ್ನ ಸಮೃದ್ಧಿ

ಸುದಾಮ ಶ್ರೀಕೃಷ್ಣನಿಗೆ ಭಕ್ತಿಯಿಂದ ಪುಷ್ಪವನ್ನು ಸಮರ್ಪಣೆ ಮಾಡಿದ. ದೇವರಿಗೆ ಭಕ್ತಿಯಿಂದ ಪುಷ್ಪವನ್ನು ಸಮರ್ಪಣೆ ಮಾಡಿದರೆ ಎಂಥ ಉತ್ತಮ ಫಲ ಸಿಗುತ್ತದೆ ಎನ್ನುವುದಕ್ಕೆ ರಾಮಾಯಣದಲ್ಲಿ ಒಂದು ಕಥೆ ಇದೆ. ಶ್ವೇತ ಎಂಬ ರಾಜ ಇದ್ದ. ಅವನು ಅನ್ನ ಇಲ್ಲದೇ ಯಜ್ಞ ಮಾಡುತ್ತಿದ್ದ. ಅನ್ನವಿಲ್ಲದೇ ಯಜ್ಞ ಮಾಡುವುದು ತಾಮಸ. ದಕ್ಷಿಣೆ, ಅನ್ನದಾನ, ವಿಧಿಗಳು ಇಲ್ಲದ ಯಜ್ಞ ತಾಮಸ ಯಜ್ಞ. ಅದನ್ನು ಮಾಡಬಾರದು ಎಂದು ಭಗವದ್ಗೀತೆ ಹೇಳುತ್ತದೆ. ಶ್ವೇತರಾಜ ಯಜ್ಞಗಳನ್ನು ಮಾಡುತ್ತಿದ್ದ. ಕೊನೆಯಲ್ಲಿ ಅನ್ನದಾನ ಮಾಡುತ್ತಿರಲಿಲ್ಲ. ಯಜ್ಞ ನೋಡಲು ಬಂದವರಿಗೂ ಪ್ರದಕ್ಷಿಣೆ ನಮಸ್ಕಾರ ಮಾಡಿ ಹೊರಡಿ ಎಂದು ಹೇಳುತ್ತಿದ್ದ.

ಯಾರಿಗೂ ಊಟ ಹಾಕುತ್ತಿರಲಿಲ್ಲ. ಹಸಿದವರಿಗೆ ಊಟ ಹಾಕದೇ ಹಾಗೇ ಕಳುಹಿಸಿದ್ದರ ಫಲವಾಗಿ ಅವನಿಗೆ ಅಖಂಡಹಸಿವು ಆರಂಭವಾಗುತ್ತದೆ. ಯಾರು ಎಷ್ಟು ತಿನ್ನುವುದಕ್ಕೆ ಕೊಟ್ಟರೂ ಸಾಕಾಗುತ್ತಿರಲಿಲ್ಲ. ಅವನಿಗೆ ಯಾರೂ ತಿನ್ನಲಿಕ್ಕೆ ಕೊಡದೇ ಇದ್ದಾಗ ತನ್ನ ದೇಹದ ಮಾಂಸವನ್ನೇ ಕತ್ತರಿಸಿ ತಿನ್ನುತ್ತಿದ್ದ. ಹೀಗಿರುವಾಗ ಆ ದಯನೀಯ ಅವಸ್ಥೆಯಿಂದ ಪಾರಾಗಲು ಬ್ರಹ್ಮ ದೇವರಿಗೆ ಶರಣು ಹೋಗುತ್ತಾನೆ. ಬ್ರಹ್ಮದೇವರು ನೋಡಿದರು. ಇವನು ಅನೇಕ ಯಜ್ಞಗಳನ್ನು ಮಾಡಿದ್ದಾನೆ. ಸಾತ್ವಿಕ. ಆದರೆ ಅನ್ನದಾನ ಮಾಡಲಿಲ್ಲ ಎಂದುಕೊಂಡು ಒಂದು ಪ್ರಾಯಶ್ಚಿತ್ತ ಮಾಡಿಕೋ ಎಂದು ಹೇಳುತ್ತಾರೆ.

ಸುಂದರವಾದ, ಸುಗಂಧಯುಕ್ತವಾದ ಹೂವುಗಳಿಂದ ಕೂಡಿದ ಮಾಲೆಯನ್ನು ರಾಮದೇವರಿಗೆ ಸಮರ್ಪಣೆ ಮಾಡು. ನಿನಗೆ ಎಲ್ಲ ಒಳ್ಳೆಯದಾಗುತ್ತದೆ. ಆದರೆ ನೀನೇ ಹೋಗಿ ಕೊಡಬೇಡ, ಅಗಸ್ತ್ಯ ಋಷಿಗಳಿಗೆ ಕೊಡು. ಅವರು ರಾಮಚಂದ್ರನಿಗೆ ಕೊಡುತ್ತಾರೆ ಎಂದರು. ಆಗಲಿ ಎಂದು ಹಾಗೆಯೇ ಮಾಡಿದ. ಅಗಸ್ಱರು ಅದನ್ನು ರಾಮದೇವರಿಗೆ ಕೊಟ್ಟರು. ರಾಮದೇವರು ಆ ಮಾಲೆಯನ್ನು ಧಾರಣ ಮಾಡಿದ್ದೇ ತಡ ಇವನಿಗೆ ಎಲ್ಲ ವಿಧವಾದ ಹಸಿವೆಯ ಬಾಧೆ ಹೋಯಿತು. ದೇವರಿಗೆ ಭಕ್ತಿಯಿಂದ ಪುಷ್ಪಮಾಲೆಯನ್ನು ಸಮರ್ಪಣೆ ಮಾಡಿದರೆ ಉತ್ತಮವಾದ ಅನ್ನ, ಐಶ್ವರ್ಯ ಎಲ್ಲವೂ ದೊರೆಯುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.