ಶರಣಾಗಲು ಇಬ್ಬರನ್ನು ಒಪ್ಪಿಸಿದ್ದ ವಿನಯ್, ತಲಾ ₹5 ಲಕ್ಷ ಕೊಡಲು ಒಪ್ಪಿದ್ದ ದರ್ಶನ್..! 
ನ್ಯೂಸ್

ಕೊಲೆ ಆರೋಪ ಹೊರಲು ₹10 ಲಕ್ಷ offer..!

ಶರಣಾಗಲು ಇಬ್ಬರನ್ನು ಒಪ್ಪಿಸಿದ್ದ ವಿನಯ್, ತಲಾ ₹5 ಲಕ್ಷ ಕೊಡಲು ಒಪ್ಪಿದ್ದ ದರ್ಶನ್..!

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪ ಹೊತ್ತುಕೊಂಡು ಪೊಲೀಸರಿಗೆ ಶರಣಾಗಲು ಇಬ್ಬರು ಹುಡುಗರಿಗೆ ತಲಾ 5 ಲಕ್ಷ ರೂ. ಕೊಡಲು 2ನೇ ಆರೋಪಿ ನಟ ದರ್ಶನ್ ಒಪ್ಪಿದ್ದ. ತಕ್ಷಣವೇ 10 ಲಕ್ಷ ರೂ. ನಗದನ್ನು ಬ್ಯಾಗಿಗೆ ತುಂಬಿ 10ನೇ ಆರೋಪಿ ವಿನಯ್‌ಗೆ ಖುದ್ದು ದರ್ಶನ್ ಕೊಟ್ಟಿದ್ದ ಎಂದು ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ನೀಡಿದ್ದಾನೆ.

ಮಾಫಿ ಸಾಕ್ಷಿ ಹೇಳಿಕೆ 3ನೇ ದಿನವಾದ ಬುಧವಾರವೂ ಮುಂದುವರಿಯಿತು. ಕಾಮಾಕ್ಷಿಪಾಳ್ಯ ಪೊಲೀಸರು, ಪ್ರದೋಷ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಪ್ರದೋಷ್, ತನ್ನ ಹೇಳಿಕೆ ಮುಂದುವರಿಸಿದ.

ಪಟ್ಟಣಗೆರೆ ಶೆಡ್‌ನಿಂದ ದರ್ಶನ್ ಮನೆಗೆ ಬಂದಿದ್ದೆವು. ಆಗ ವಿನಯ್, ದರ್ಶನ್‌ಗೆ ‘ನೀವು ಧೈರ್ಯವಾಗಿರಿ.. ಪೊಲೀಸರಿಗೆ ಶರಣಾಗಲು ನನ್ನ ಕಡೆಯಿಂದ ಇಬ್ಬರು ಹುಡುಗರನ್ನು ಒಪ್ಪಿಸಿದ್ದೇನೆ. ಅದಕ್ಕೆ 10 ಲಕ್ಷ ರೂ. ಖರ್ಚು ಆಗುತ್ತದೆ ಎಂದಿದ್ದ. ಕೂಡಲೇ ದರ್ಶನ್, ತನ್ನ ರೂಂನಿಂದ ಬ್ಯಾಗ್‌ನಲ್ಲಿ ಹಣ ತಂದು ವಿನಯ್ ಕೈಗೆ ಕೊಟ್ಟಿದ್ದ. ತಲಾ 5 ಲಕ್ಷ ರೂ.ನಂತೆ ಇಬ್ಬರಿಗೆ 10 ಲಕ್ಷ ರೂ. ಕೊಟ್ಟಿದ್ದ. ಚಿತ್ರದುರ್ಗದಿಂದ ಕರೆತಂದಿದ್ದ ರಾಘವೇಂದ್ರನಿಗೂ 5 ಲಕ್ಷ ರೂ. ಕೊಡಬೇಕು ಎಂದಾಗ ದರ್ಶನ್ ಮತ್ತೆ ರೂಂಗೆ ಹೋಗಿ 5 ಲಕ್ಷ ರೂ. ತಂದುಕೊಟ್ಟಿದ್ದ ಎಂದು ಪ್ರದೋಷ್ ವಿವರಿಸಿದ್ದಾನೆ.

ನೇಣು ಹಾಕಿಕೊಳ್ಳುವೆ ಎಂದಿದ್ದ ದರ್ಶನ್

ದರ್ಶನ್ ಮನೆಯಿಂದ ಹಣ ತೆಗೆದುಕೊಂಡು ಹೊರ ಬರುತ್ತಿದ್ದಾಗ, ದರ್ಶನ್ ನಮ್ಮನ್ನು ಕೂಗಿ ‘ನೀವು ಸಹಾಯ ಮಾಡದಿದ್ದರೆ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದ. ಆಗ 12ನೇ ಆರೋಪಿ ಲಕ್ಷ್ಮಣ್, ನಾವು ಏನಾದರೂ ಮಾಡುತ್ತೇವೆ. ಆ ರೀತಿ ಮಾತನಾಡಬೇಡಿ ಎಂದ. ಅಲ್ಲಿಂದ ಎಲ್ಲರೂ ಹೊರಟು ಬಂದೆವು ಎಂದು ಪ್ರದೋಷ್ ಹೇಳಿದ್ದಾನೆ.

ಶವ ಎಸೆಯಲು ಸ್ಥಳ ಹುಡುಕಾಟ

ರೇಣುಕಸ್ವಾಮಿ ಶವ ಬಿಸಾಡಲು ಸೂಕ್ತ ಸ್ಥಳ ಹುಡುಕಲು 10ನೇ ಆರೋಪಿ ವಿನಯ್ ಕಾರಲ್ಲಿ ನಾನು, ಲಕ್ಷ್ಮಣ್ ಸೇರಿ ಬೇರೆ ಆರೋಪಿಗಳು ಕೆಂಗೇರಿ ಕಡೆಗೆ ಹೊರಟೆವು. ಬಳಿಕ ನಾಯಂಡಹಳ್ಳಿ ಜಂಕ್ಷನ್ ಹತ್ತಿರ ಹೋಗುತ್ತಿದ್ದಂತೆಯೇ ನಾಗರಬಾವಿ ಕಡೆಗೆ ಹೋದೆವು. ಅಲ್ಲಿಂದ ಮಾಳಗಾಳ ಎಂಬ ಸ್ಥಳ ಸಿಕ್ಕಿತು. ಅಲ್ಲಿ ನಿರ್ಜನ ಪ್ರದೇಶ ಹುಡುಕುತ್ತಿದ್ದೆ. ಅಲ್ಲಿಂದ ಮುಂದಕ್ಕೆ ಹೊರಟಾಗ ದೊಡ್ಡ ಮೋರಿ ಹರಿಯುತ್ತಿತ್ತು. ಅದೇ ಜಾಗವನ್ನೇ ಶವ ವಿಲೇವಾರಿ ಮಾಡಲು ಗುರುತಿಸಿಕೊಂಡು ಶೆಡ್ ಕಡೆಗೆ ಹೊರಟೆ ಎಂದು ಪ್ರದೋಷ್ ಹೇಳಿದ್ದಾನೆ.

ಹುಡುಗರು ಶೆಡ್ ಬಳಿ ಬಂದರು:

ಶವ ವಿಲೇವಾರಿ ಮಾಡಲು ಸ್ಥಳ ಗುರುತು ಮಾಡಿ, ಶೆಡ್‌ಗೆ ಬಂದೆವು. ಅಷ್ಟರಲ್ಲಿ ಪೊಲೀಸರಿಗೆ ಸರೆಂಡರ್ ಆಗಲು ಇಬ್ಬರು ಹುಡುಗರು (ಕಾರ್ತಿಕ್ ಮತ್ತು ನಿಖಿಲ್), ಶೆಡ್ ಬಳಿ ಬಂದು ನಿಂತಿದ್ದರು. ಅವರೀಗ 15 ಮತ್ತು 17ನೇ ಆರೋಪಿಗಳಾಗಿದ್ದಾರೆ. ದೀಪಕ್ ಅವರ ಜತೆ ಮಾತನಾಡುತ್ತಾ ‘ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಒಬ್ಬ ಸತ್ತಿದ್ದಾನೆ. ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿ ನಿಮ್ಮ ತೆಗೆ ಬರುತ್ತಾನೆ. ಮೂವರೂ ಸರೆಂಡರ್ ಆಗಿ, ನಾವು ನಿಮ್ಮ ಮನೆಗೆ ಹಣ ತಲುಪಿಸುತ್ತೇವೆ. ಜತೆಗೆ ಬೇಲ್ ಸಹ ಮಾಡಿಸಿ ಜೈಲಿನಿಂದ ಬಿಡಿಸುತ್ತೇವೆ ಎಂದು 13ನೇ ಆರೋಪಿ ದೀಪಕ್ ಹೇಳಿದ್ದಾಗಿ ಪ್ರದೋಷ್ ವಿವರಿಸಿದ್ದಾನೆ.

ಪೊಲೀಸರಿಗಾಗಿ ಸುಳ್ಳು ಕತೆ ಕಟ್ಟಿದರು...!

ರಾಘವೇಂದ್ರ, ರೇಣುಕಸ್ವಾಮಿಗೆ ಕೆಲ ದಿನಗಳ ಹಿಂದೆ 5 ಲಕ್ಷ ರೂ. ಸಾಲ ಕೊಟ್ಟಿದ್ದ. ಆ ಸಾಲವನ್ನು ರೇಣುಕಸ್ವಾಮಿ ಬೆಂಗಳೂರಿನಲ್ಲಿ ಕೊಡುತ್ತೇನೆಂದು ರಾಘವೇಂದ್ರನಿಗೆ ತಿಳಿಸಿದ್ದ. ಆದ್ದರಿಂದ ಅವರಿಬ್ಬರು ಬೆಂಗಳೂರಿಗೆ ಬಂದಿದ್ದರು. ಅವನು ಹಣ ಕೊಡದಿದ್ದಾಗ ರಾಘವೇಂದ್ರ, ನಮ್ಮನ್ನು ಕರೆಸಿ ಹೊಡೆಸಿದ. ಆ ವೇಳೆ ರೇಣುಕಸ್ವಾಮಿ ಮೃತಪಟ್ಟ ಎಂದು ದೀಪಕ್ ಕತೆ ಕಟ್ಟಿದ್ದ. ಇದನ್ನೇ ಪೊಲೀಸರ ಮುಂದೆ ಹೇಳುವಂತೆ ಶರಣಾಗಲು ಬಂದಿದ್ದ ಹುಡುಗರಿಗೆ ಸೂಚಿಸಿದ್ದ ಎಂದು ಪ್ರದೋಷ್ ಹೇಳಿದ್ದಾನೆ.

ದರ್ಶನ್ ಜತೆ Photoಗೆ ಬಂದಿದ್ದೆ..!

8ನೇ ಆರೋಪಿ ರವಿಗೆ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಮೋರಿಗೆ ಹಾಕಿ ಚಿತ್ರದುರ್ಗಕ್ಕೆ ಹೊರಡು ಎಂದಿದ್ದೆ. ಆಗ ರವಿ, ‘ನಾನು ಕ್ಯಾಬ್ ಡ್ರೈವರ್ ಅಣ್ಣ, ಇವರೆಲ್ಲ ದರ್ಶನ್ ಜತೆಗೆ ೆಟೋ ತೆಗೆಸುತ್ತೇನೆ ಬಾ ಎಂದು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದಾರೆ’. ಇದನ್ನೆಲ್ಲ ಮಾಡಲ್ಲ ಎಂದ. ಹಾಗಾಗಿ ನಾನು ಅವರನ್ನು ಊರಿಗೆ ಕಳಿಸಿದೆ. ನಂತರ ದೀಪಕ್, ತಮ್ಮ ಕಾರಿನಲ್ಲಿ ಆ ಇಬ್ಬರು ಹುಡುಗರನ್ನು ಕರೆದುಕೊಂಡು ಮೃತದೇಹವನ್ನು ರಾತ್ರಿ 12.30ರಿಂದ 1 ಗಂಟೆಯಲ್ಲಿ ಮೋರಿ ಬಳಿ ಎಸೆದು ಬಂದಿದ್ದರು ಎಂದು ಪ್ರದೋಷ್ ತಿಳಿಸಿದ್ದಾನೆ.

ಸೋಮವಾರವೂ ಮುಂದುವರಿಕೆ

ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೋಮವಾರ (ಅ.5) ಮತ್ತೆ ಮುಂದುವರಿಯಲಿದೆ. ಸದ್ಯ ಸೋಮವಾರ, ಮಂಗಳವಾರ ಹಾಗೂ ಬುಧವಾರ ಹೇಳಿಕೆ ದಾಖಲಿಸಿದ್ದಾನೆ. ಪ್ರದೋಷ್ ಹೇಳಬೇಕಿರುವ ಇನ್ನೂ 19 ಸಾಕ್ಷಿಗಳು ಬಾಕಿ ಉಳಿದಿವೆ.