ನ್ಯೂಸ್

ಆಫ್​ಸ್ಪಾ ಸಡಿಲ ಸಂಚಲನ; ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ವ್ಯಾಪ್ತಿ

ಜಮ್ಮು-ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಆಫ್​ಸ್ಪಾ ಮತ್ತೆ ಸುದ್ದಿಯಲ್ಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಟ್ವೀಟ್ ಅದಕ್ಕೆ ಕಾರಣ. ಈ ವಿದ್ಯಮಾನದ ಸಂಕ್ಷಿಪ್ತ ವಿವರ ಇಲ್ಲಿದೆ.

ಈಶಾನ್ಯದ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ ವ್ಯಾಪ್ತಿಯ ತೊಂದರೆಗ್ರಸ್ಥ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಊಖಕಅ ಆಫ್​ಸ್ಪಾ) ಸಡಿಲಗೊಳಿಸಲು ಸರ್ಕಾರ ತೀರ್ವನಿಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಟ್ವೀಟ್ ಸಂದೇಶ ಆ ಭಾಗದಲ್ಲಿ ಸಂಚಲನ ಮೂಡಿಸಿದೆ. ‘ಈ ಮೂರು ರಾಜ್ಯಗಳಲ್ಲಿ ದಶಕಗಳಿಂದ ಚಾಲ್ತಿಯಲ್ಲಿರುವ ನಿಯಮವನ್ನು ತೊಂದರೆಗೊಳಗಾಗಿರುವ ಪ್ರದೇಶಗಳಲ್ಲಿ ಸಡಿಲಗೊಳಿಸಲು ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ತೀರ್ವನಿಸಿದೆ. ಈ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ, ಸುರಕ್ಷತೆ ವಾತಾವರಣ ಸುಧಾರಿಸಿದೆ. ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡ ಬೇಕಾಗಿರುವುದರಿಂದ ಸ್ಥಿರ ಪ್ರಯತ್ನಬೇಕಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಅನೇಕ ಒಪ್ಪಂದಗಳು ಏರ್ಪಟ್ಟಿವೆ. ಹೀಗಾಗಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ’ ಎಂದು ಅಮಿತ್ ಷಾ ಹೇಳಿದ್ದಾರೆ.

ಬ್ರಿಟಿಷರ ಅಸ್ತ್ರ: ಆಮ್್ಡರ್ ಫೋರ್ಸ್ ಸ್ಪೆಷಲ್ ಪವರ್ ಸುಗ್ರೀವಾಜ್ಞೆಯನ್ನು ಮೊದಲು ಜಾರಿಗೊಳಿಸಿದವರು ಬ್ರಿಟಿಷರು. 1942ರಲ್ಲಿ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಚಳವಳಿ) ಚಳವಳಿಕಾರರ ವಿರುದ್ಧ ಬ್ರಿಟಿಷರು ಬಂಗಾಳ, ಅಸ್ಸಾಂ ಹಾಗೂ ಚಳವಳಿ ತೀವ್ರವಾಗಿದ್ದ ಪ್ರದೇಶಗಳಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಿ, ಭಾರತೀಯರ ಮೇಲೆ ನಿರ್ಬಂಧ ಹೇರಿದ್ದರು. 1947ರಲ್ಲಿ ಭಾರತದ ವಿಭಜನೆ ಕಾಲದಲ್ಲೂ ಗಲಭೆಗಳು ನಡೆಯದಂತೆ ಎಚ್ಚರ ವಹಿಸಲು ಆಫ್ಸಾ ಪಡೆಯನ್ನು ನಿಯೋಜಿಸಲಾಗಿತ್ತು.

ಐರೋಮ್ ಶರ್ವಿುಳಾ ಪ್ರತಿಭಟನೆಯ ನೆನಪು...

ಆಫ್​ಸ್ಪಾದಿಂದಾಗಿ ಅಮಾಯಕ ಜನ ಪ್ರಾಣ ಕಳೆದುಕೊಳ್ಳಬೇಕಾಗಿದೆ. ಇದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ಸೈನಿಕರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಇವೆ. ‘ಮಣಿಪುರದ ಉಕ್ಕಿನ ಮಹಿಳೆ’ ಐರೋಮ್ ಶರ್ವಿುಳಾ ಚಾನು 2000ರ ನವೆಂಬರ್ 2ರಂದು ಆಫ್​ಸ್ಪಾ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು, 16 ವರ್ಷಗಳಷ್ಟು ಕಾಲ ಮುಂದುವರಿಸಿದ್ದರು. ಆ ಮೂಲಕ ಪ್ರಪಂಚದ ಅತಿ ದೀರ್ಘಾವಧಿಯ ಉಪವಾಸ ಸತ್ಯಾಗ್ರಹಿ ಎನಿಸಿಕೊಂಡಿದ್ದರು. 2016 ಆಗಸ್ಟ್ 9ರಂದು ಅವರು ಉಪವಾಸ ಕೈಬಿಟ್ಟರು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಭಾರತದಲ್ಲಿ ಆಫ್​ಸ್ಪಾವನ್ನು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿತ್ತು. 2015ರ ಜೂನ್​ನಲ್ಲಿ ತ್ರಿಪುರದಲ್ಲಿ ರದ್ದುಗೊಳಿಸಲಾಯಿತು. ಕೆಲವು ರಾಜ್ಯಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ...

ಪಂಜಾಬ್, ನಾಗಾಲ್ಯಾಂಡ್, ಜಮ್ಮು ಮತ್ತು ಕಾಶ್ಮೀರಗಳ ಪ್ರತ್ಯೇಕತೆ ಬೇಡಿಕೆ ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಸಮಸ್ಯೆಯಾಗಿ ಪರಿಣಮಿಸಿತು. ಭಾರತ ಸರ್ಕಾರ ಈ ಸಮಸ್ಯೆಗಳನ್ನು ಬಗೆಹರಿಸಲು ಕಠಿಣ ನೀತಿ ಅನುಸರಿಸಬೇಕಾಯಿತು. ಈಶಾನ್ಯ ಭಾರತದಲ್ಲಿ ನಾಗಾರಾಷ್ಟ್ರ ಸ್ಥಾಪನೆಗೆ ಗಾರೋ ಬೆಟ್ಟ ಪ್ರದೇಶಗಳಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾದವು. ಉಗ್ರಗಾಮಿ ಚಟುವಟಿಕೆ ನಿಯಂತ್ರಿಸಲು 1958ರಲ್ಲಿ ‘ಆಮ್್ಡರ್ ಫೋರ್ಸ್ (ಸ್ಪೆಷಲ್ ಪವರ್) ಆಕ್ಟ್’ (ಅಊಖಕಅ) ಕಾಯ್ದೆಯನ್ನು ಈಶಾನ್ಯ ಭಾರತದ 7 ರಾಜ್ಯಗಳಲ್ಲಿ (ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ) ಜಾರಿಗೆ ತರಲಾಯಿತು. 1983ರಲ್ಲಿ ಪಂಜಾಬ್ ಮತ್ತು ಚಂಡೀಗಢದಲ್ಲಿ ಆಫ್​ಸ್ಪಾ ಜಾರಿಗೊಳಿಸಲಾಗಿತ್ತಾದರೂ ನಂತರ ದಲ್ಲಿ ಹಿಂತೆಗೆದುಕೊಳ್ಳಲಾಗಿದೆ. 1990ರಲ್ಲಿ ಜಮ್ಮು- ಕಾಶ್ಮೀರದಲ್ಲಿ ಜಾರಿಗೊಳಿಸಲಾಯಿತು.

ಏನಿದು ಆಫ್​ಸ್ಪಾ?

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕೇವಲ 6 ವಿಧಿಗಳನ್ನು ಹೊಂದಿರುವ ಕಾನೂನು. 1958ರ ಸೆ.11ರಂದು ಈ ಕಾನೂನನ್ನು ಸಂಸತ್ತು ಅಂಗೀಕರಿಸಿತು. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಅಪಾಯಕಾರಿ ಎನಿಸಿರುವ ಪ್ರದೇಶಗಳಿಗೆ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವ ಮೂಲಕ ಸೇನೆಗೆ ವಿಶೇಷಾಧಿಕಾರ ನೀಡಲಾಗುತ್ತದೆ. ಅದರಂತೆ ಸೇನೆಗೆ ಈ ಕೆಳಗಿನ ಅಧಿಕಾರಗಳಿರುತ್ತವೆ.

  •   ಕಾನೂನು ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಅಧಿಕಾರವಿರುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳಬೇಕಾಗಿ ಬಂದರೂ ಅದಕ್ಕೆ ಸೇನೆ ಹೊಣೆಯಾಗುವುದಿಲ್ಲ.
  •   ಯಾವುದೇ ರೀತಿಯ ಶಸ್ತ್ರಾಸ್ತ್ರ ಸಂಗ್ರಹ, ಅಕ್ರಮ ತರಬೇತಿ ಶಿಬಿರ ಮೊದಲಾದವುಗಳ ಮೇಲೆ ಸೇನೆ ಏಕಾಏಕಿ ದಾಳಿ ನಡೆಸಿ ನಾಶಪಡಿಸಬಹುದು ಅಥವಾ ವಶಪಡಿಸಿಕೊಳ್ಳಬಹುದು.
  •   ದುಷ್ಕೃತ್ಯ ಎಸಗಿದವರನ್ನು ವಾರಂಟ್ ಇಲ್ಲದೆ ಬಂಧಿಸಬಹುದು
  •   ಶಂಕಿತ ಸ್ಥಳಗಳಿಗೆ ಅದಕ್ಕೆ ಸಂಬಂಧಿಸಿದವರ ಸಮ್ಮತಿಯಿಲ್ಲದೆ ಪ್ರವೇಶಿಸುವ ಅಧಿಕಾರ
  •   ಶಸ್ತ್ರಾಸ್ತ್ರ ಸರಬರಾಜು, ರವಾನೆ ಮೊದಲಾದವುಗಳ ಕುರಿತು ಶಂಕಿತರ ವಾಹನಗಳನ್ನು ತಡೆಯಬಹುದು ಹಾಗೂ ವಶಪಡಿಸಿಕೊಳ್ಳಬಹುದು
  •   ಸೇನೆ ಕೈಗೊಂಡ ಕ್ರಮಗಳಿಗೆ ಕಾನೂನಿನ ರಕ್ಷಣೆ ಇರುತ್ತದೆ. ಈ ಕ್ರಮಗಳನ್ನು ಪ್ರಶ್ನಿಸಿ ಸಾರ್ವಜನಿಕರ ಹಕ್ಕು ಉಲ್ಲಂಘನೆ, ಕರ್ತವ್ಯಲೋಪ ಇತರ ಪ್ರಕರಣಗಳನ್ನು ಸೇನೆ ವಿರುದ್ಧ ಹೂಡಲು ಸಾಧ್ಯವಾಗುವುದಿಲ್ಲ.