ಶಿವಮೊಗ್ಗ: ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಶಿವಮೊಗ್ಗ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿಮುಲ್(ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ), ಸಹಕಾರ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನ. 14ರಿಂದ 20ರವರೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಧ್ಯೇಯದೊಂದಿಗೆ ಸಹಕಾರ ಸಪ್ತಾಹ ನಡೆಯಲಿದ್ದು, ನ.14ರಂದು ಬೆಳಗ್ಗೆ 10.30ಕ್ಕೆ ಸೊರಬ ರಂಗಮಂದಿರದಲ್ಲಿ ಸಹಕಾರ ಸಪ್ತಾಹಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡುವರು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವ ಕುರಿತ ವಿಷಯದೊಂದಿಗೆ ಆರಂಭಗೊಳ್ಳುವ ಮೊದಲ ದಿನದ ಸಪ್ತಾಹದ ಧ್ವಜಾರೋಹಣವನ್ನು ಎಂಎಡಿಬಿ ಅಧ್ಯಕ್ಷ ಎಂ.ಆರ್.ಮಂಜುನಾಥ ಗೌಡ ನೆರವೇರಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿರುವರು. ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
15ರಂದು ಬೆಳಗ್ಗೆ 10.30ಕ್ಕೆ ಸಾಗರದ ಈಡಿಗರ ಭವನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, 16ರಂದು ಬೆಳಗ್ಗೆ 10.30ಕ್ಕೆ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ, 17ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, 18ರಂದು ಬೆಳಗ್ಗೆ 11ಕ್ಕೆ ತೀರ್ಥಹಳ್ಳಿ ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಶಾಸಕ ಆರಗ ಜ್ಞಾನೇಂದ್ರ, 19ರಂದು ಬೆಳಗ್ಗೆ 10ಕ್ಕೆ ಹೊಸನಗರ ಬಟ್ಟೆಮಲ್ಲಪ್ಪದ ಸಂತೆ ಮಾರ್ಕೆಟ್ ಸಮೀಪ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, 20ರಂದು ಬೆಳಗ್ಗೆ 10.30ಕ್ಕೆ ಭದ್ರಾವತಿಯ ಶ್ರೀ ಪಾಡುರಂಗ ಕಲ್ಯಾಣ ಮಂದಿರದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಸಪ್ತಾಹ ಉದ್ಘಾಟಿಸುವರು ಎಂದು ತಿಳಿಸಿದರು.
ಸಹಕಾರ ಸಪ್ತಾಹದ ಅಂಗವಾಗಿ ಸಹಕಾರಿಗಳಿಗೆ ಕ್ರೀಡಾಕೂಟ, ಗೀತ ಗಾಯನ ಸ್ಪರ್ಧೆ, ಸಪ್ತಾಹದ ಮುಖ್ಯ ಧ್ಯೇಯದ ಮೇಲೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಪಿಯು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಹಮ್ಮಿಕೊಂಡಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಪ್ರತಿ ವರ್ಷದಂತೆ ಪ್ರತಿ ತಾಲೂಕಿನಲ್ಲೂ ಉತ್ತಮ ಸಹಕಾರಿ, ಉತ್ತಮ ಮಹಿಳಾ ಸಹಕಾರಿ, ಉತ್ತಮ ಸಹಕಾರ ಸಂಘ, ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಶಿಕಾರಿಪುರದ ಈಶ್ವರಪ್ಪ, ಎಚ್.ಎಸ್.ಸಂಜೀವ್‌ಕುಮಾರ್, ಯಶವಂತ್, ಗೊಂದಿ ಜಯರಾಮ, ವೀರಮ್ಮ ಸುದ್ದಿಗೋಷ್ಠಿಯಲ್ಲಿದ್ದರು.