ಭುವನೇಶ್ವರ: ನಾವು ಕೆಲವೊಮ್ಮೆ ನ್ಯೂಸ್ ಚಾನಲ್ಗಳನ್ನು ಹಾಕಿದಾಗ ನಾವು ಸುದ್ದಿ ಓದುವ ಆ್ಯಂಕರ್ ಮೇಲೆ ನಮ್ಮ ಕಣ್ಣು ಬೀಳುವುದಂತು ಸಹಜ. ಅವರ ಅಂದ ನಿಮ್ಮನ್ನು ಹೆಚ್ಚಾಗಿ ಸೆಳೆಯುತ್ತದೆ. ಒಂದುಕ್ಷಣ ನಾವು ನಮ್ಮ ನೆಚ್ಚಿನ ನಿರೂಪಕಿಯನ್ನು ನೋಡಿ ಖುಷಿಪಡುವುದಂತು ಸಹಜ. ಆದರೆ, ಇದೀಗ ಒಡಿಶಾದ ಖಾಸಗಿ ಸುದ್ದಿ ಸಂಸ್ಥೆಯೊಂದು ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿ ಲೀಸಾ ಅವರನ್ನು ಪರಿಚಯಿಸಿದೆ.
ಒಡಿಶಾ ಟೆಲಿವಿಷನ್ ಲಿಮಿಟೆಡ್ (OTV) ರಾಜ್ಯದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿ ಲೀಸಾ ಅವರನ್ನು ಪರಿಚಯಿಸಿದೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಎಐ ಸುದ್ದಿ ನಿರೂಪಕಿ ಲೀಸಾ ಅವರ ಪರಿಚಯ ನಡೆಯಿತು. ನ್ಯೂಸ್ ಆ್ಯಂಕರ್ ಆಗಿ ಲೀಸಾ ಯಶಸ್ವಿಯಾಗಿ ಸುದ್ದಿಯನ್ನು ಸಹ ಓದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ OTV ಸುದ್ದಿ ಸಂಸ್ಥೆ AI ಸುದ್ದಿ ನಿರೂಪಕಿ ಲೀಸಾ ಬಹು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂಗ್ಲೀಷ್ ಜೊತೆ ಒಡಿಯಾದಲ್ಲೂ ಸುದ್ದಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಟ್ವೀಟ್ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ(MD) ಜಗ್ಗಿ ಮಂಗತ್ ಪಾಂಡಾ ಇಂದಿನ ಕಾಲಘಟ್ಟದಲ್ಲಿ ಜನತೆ ತಮ್ಮ ಹೆಚ್ಚಿನ ಸಮಯವನ್ನು ಇಂಟರ್ನೆಟ್ನಲ್ಲಿ ಕಳೆಯುತ್ತಾರೆ. ಈ ನಿಟ್ಟಿನಲ್ಲಿ ನಾವು ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿತನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು AI ಆ್ಯಂಕರ್ ಲೀಸಾ ಅವರನ್ನು ಪರಿಚಯಿಸಿದ್ದೇವೆ ಎಂದು ತಿಳಿಸಿದ್ದಾರೆ.