ಕಟಕ್: ಲಾಕ್ಡೌನ್ನಿಂದ ಅದೆಷ್ಟೋ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಹಲವು ಅತಿಥಿ ಶಿಕ್ಷಕರಂತೂ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಂಡವರೂ ಇದ್ದಾರೆ.
ಇದೀಗ ವಕೀಲರೋರ್ವರು ತಮ್ಮ ಜೀವನ ನಡೆಸಲು ಅದೇ ಮಾರ್ಗ ಕಂಡುಕೊಂಡಿದ್ದಾರೆ. ಕರೊನಾ ವೈರಸ್ ಸಾಂಕ್ರಾಮಿಕದಿಂದ ಕೆಲಸವಿಲ್ಲದೆ, ಕೈಯಲ್ಲಿ ದುಡ್ಡಿಲ್ಲದೆ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಆರ್ಥಿಕ ಸಂಕಷ್ಟಕ್ಕೀಡಾದಾಗ ವಕೀಲ ಸಪನ್ ಕುಮಾರ್ ಪಾಲ್ ಅವರು ಒಡಿಶಾ ಸ್ಟೇಟ್ ಬಾರ್ ಕೌನ್ಸಿಲ್ ಬಳಿ ತೆರಳಿ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾರೂ ಅವರ ಮನವಿಯನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಹಣ್ಣು, ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ಸಪನ್ ಕುಮಾರ್ ಅವರು 2012ರಿಂದಲೂ ಒಡಿಶಾ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಒಡಿಶಾ ಸ್ಟೇಟ್ ಬಾರ್ ಕೌನ್ಸಿಲ್ ಬಳಿ ಸಹಾಯ ಕೇಳಲು ಹೋದಾಗ, ನಾವು ಇಲ್ಲಿ 10 ವರ್ಷದಿಂದ ಅಭ್ಯಾಸ ಮಾಡುತ್ತಿರುವವರಿಗೆ ಮಾತ್ರ ಆರ್ಥಿಕ ನೆರವು ನೀಡುತ್ತೇವೆ. ನೀವು ಬಂದು ಎಂಟು ವರ್ಷವಷ್ಟೇ ಆಗಿದೆ ಎಂದು ನುಣುಚಿಕೊಂಡಿದ್ದಾರೆ ಎಂದು ಸಪನ್ ಕುಮಾರ್ ತಿಳಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಹಣ ಇಲ್ಲದೆ ತುಂಬ ಕಷ್ಟಪಡುವಂತಾಯಿತು. ನಂತರ ಸ್ನೇಹಿತನ ಬಳಿ 1000 ರೂಪಾಯಿ ಸಾಲ ಪಡೆದು ತರಕಾರಿ ಮಾರಾಟಕ್ಕೆ ಬೇಕಾದ ವಸ್ತುಗಳನ್ನೆಲ್ಲ ಹೊಂದಿಸಿಕೊಂಡೆ. ಇದೀಗ ಹೈಕೋರ್ಟ್ ಎದುರೇ ತರಕಾರಿ ಮಾರುತ್ತಿದ್ದೇನೆ. ಹೀಗಾದರೂ ನಮ್ಮ ಕಷ್ಟ ಒಡಿಶಾ ಸ್ಟೇಟ್ ಬಾರ್ ಕೌನ್ಸಿಲ್ ಗೆ ಗೊತ್ತಾಗಬೇಕು ಎಂದು ಹೇಳಿದ್ದಾರೆ. ನನ್ನ ಹೊಟ್ಟೆಪಾಡಿಗೂ ಆಯ್ತು...ಈ ಮೂಲಕ ಪ್ರತಿಭಟನೆಯೂ ಆಯ್ತು ಎಂಬ ಕಾರಣಕ್ಕೆ ಹೀಗೆ ಇಲ್ಲಿ ತರಕಾರಿ ಮಾರುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)