ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ವಾಹನದ ಮೇಲೆ ಪಾಕ್ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.
ಬಾಲಾಕೋಟ್ ದಾಳಿ: 2019ರ ಫೆ.14ರಂದು ಜೈಷ್ ಸಂಘಟನೆಯ ಉಗ್ರ ಆದಿಲ್ ದರ್ ಭಾರಿ ಪ್ರಮಾಣದ ಸುಧಾರಿತ ಸ್ಪೋಟಕಗಳನ್ನು ತುಂಬಿದ್ದ ಕಾರೊಂದನ್ನು ಶ್ರೀನಗರದ ಕಡೆಗೆ ತೆರಳುತ್ತಿದ್ದ ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಈ ವೇಳೆ ಸಂಭವಿಸಿದ ಭೀಕರ ಸ್ಪೋಟದಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ಘಟನೆಯಿಂದಾಗಿ ಪಾಕ್ ವಿರುದ್ಧ ಪ್ರತೀಕಾರದ ಕೂಗು ಜೋರಾಗಿತ್ತು. ಜತೆಗೆ ಉಭಯ ದೇಶಗಳ ನಡುವೆ ಯುದ್ಧದ ಕಾಮೋಡ ಮೂಡಿತ್ತು. ಪುಲ್ವಾಮಾ ದಾಳಿ ನಡೆದ 12ನೇ ದಿನಕ್ಕೆ ಪಾಕ್ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ ಕಳೆದ ವರ್ಷ ಇದೇ ದಿನ(ಫೆ.26) ನಸುಕಿನ ವೇಳೆ, ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ್ದ 12 ಮಿರಾಜ್ -2000 ಯುದ್ಧ ವಿಮಾನಗಳು ಜೈಷ್ನ ತರಬೇತಿ ಕೇಂದ್ರಗಳ ಮೇಲೆ ಅತ್ಯಾಧುನಿಕ ಬಾಂಬ್ಗಳನ್ನು ಹಾಕಿ ಸಂಪೂರ್ಣ ನಾಶಮಾಡಿದ್ದವು. ನಸುಕಿನ 3.30ರಿಂದ 3.55ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುಹಾಕಲಾಗಿತ್ತು. ಆದರೆ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಚ್ಚಿಕೊಳ್ಳಲು ದಾಳಿಯನ್ನು ಅಲ್ಲಗಳೆದಿತ್ತು.
ವೀರ ಅಭಿನಂದನ್
ಭಾರತ ತನ್ನ ನೆಲದಲ್ಲಿ ದಾಳಿ ನಡೆಸಿದೆ ಎಂಬುದು ಗೊತ್ತಾಗುತ್ತಿದ್ದಂತೆ ಪಾಕ್ ಕೂಡ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ನ ವಿಮಾನಗಳು ಭಾರತ ಗಡಿದಾಟಿ ಒಳಗೆ ಬಂದಿದ್ದವು. ತಕ್ಷಣ ಭಾರತದ ಕಡೆಯಿಂದ ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್ನ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿತ್ತು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್ ಅಭಿನಂದನ್ರನ್ನು ಭಾರತಕ್ಕೆ ಹಸ್ತಾಂತರಿಸಿತು.
ದಾಳಿ ಹೇಗೆ ನಡೆಯಿತು?
# ಫೆ. 25 ರಾತ್ರಿ 11 ಗಂಟೆ - ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸುವ ಕುರಿತು ಪ್ರಧಾನಿ ಕಚೇರಿ, ರಕ್ಷಣಾ ಸಚಿವಾಲಯದಿಂದ ಅಂತಿಮ ಒಪ್ಪಿಗೆ
# ಫೆ. 26 ರಾತ್ರಿ 12.15 - ವೈಮಾನಿಕ ದಾಳಿ ಕುರಿತು ವಾಯುಪಡೆಯ ಹಿರಿಯ ಅಧಿಕಾರಿಗಳಿಂದ ಅಂತಿಮ ಸಿದ್ಧತೆ. ಅಂಬಾಲಾ, ಗ್ವಾಲಿಯರ್, ಬರೇಲಿ ವಾಯುನೆಲೆಯಲ್ಲಿ ಹೈ ಅಲರ್ಟ್ ಘೋಷಣೆ
# ರಾತ್ರಿ 1 - ವಿವಿಧ ವಾಯುನೆಲೆಯಲ್ಲಿದ್ದ ಮಿರಾಜ್-2000 ವಿಮಾನಗಳಿಗೆ ಲೇಸರ್ ಗೈಡೆಡ್ ಬಾಂಬ್ ಸಮೇತ ವಿವಿಧ ಶಸ್ತ್ರಾಸ್ತ್ರ, ಉಪಕರಣ ಅಳವಡಿಕೆ
# ರಾತ್ರಿ 2 - ದೆಹಲಿ ಸಮೇತ ಬಹುತೇಕ ಎಲ್ಲ ವಾಯುನೆಲೆಗಳಲ್ಲಿ ಚಟುವಟಿಕೆ ತೀವ್ರ
# 3.15 - 12 ಮಿರಾಜ್ ವಿಮಾನಗಳ ಹಾರಾಟ ಆರಂಭ
# 3.30 -3.55 - ಎಲ್ಒಸಿ ದಾಟಿ, ಜೈಷ್ ಉಗ್ರರ ಮೂರು ಪ್ರತ್ಯೇಕ ತರಬೇತಿ ಕೇಂದ್ರದ ಮೇಲೆ ಬಾಂಬ್ ದಾಳಿ
# 4 ಗಂಟೆ ಬಳಿಕ - ವಿಮಾನಗಳು ವಾಯುನೆಲೆಗೆ ಸುರಕ್ಷಿತವಾಗಿ ವಾಪಸ್. ವೈಮಾನಿಕ ದಾಳಿಯ ಸಫಲತೆ ಕುರಿತು ಪ್ರಧಾನಿ ಕಚೇರಿ, ರಕ್ಷಣಾ ಸಚಿವಾಲಯಕ್ಕೆ ಮಾಹಿತಿ ರವಾನೆ