ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ರನ್ನು ಭೇಟಿ ಮಾಡಲು ಭಾರತೀಯ ಕಾನ್ಸುಲರ್ ಅಧಿಕಾರಿಗಳಿಗೆ ಪಾಕಿಸ್ತಾನ ಸರ್ಕಾರ ಅವಕಾಶ ನೀಡಿತ್ತು. ಇಬ್ಬರು ಕಾನ್ಸುಲರ್ ಅಧಿಕಾರಿಗಳು ಜಾಧವ್ರನ್ನು ಗುರುವಾರ ಮಧ್ಯಾಹ್ನ ಭೇಟಿ ಮಾಡಿ ಮುಕ್ತವಾಗಿ ರ್ಚಚಿಸಿದ್ದಾರೆ ಎಂದು ಸರ್ಕಾರ ಹೇಳಿದೆ.
ಜಾಧವ್ಗೆ ನೀಡಿದ ಎರಡನೇ ಕಾನ್ಸುಲರ್ ಸೇವೆ ಇದಾಗಿದೆ. 2019 ಸೆಪ್ಟೆಂಬರ್ 2ರಂದು ಮೊದಲ ಬಾರಿಗೆ ಭಾರತೀಯ ಕಾನ್ಸುಲರ್ ಭೇಟಿಯಾಗಿ ರ್ಚಚಿಸಿದ್ದರು. ಮರಣದಂಡನೆ ವಿಧಿಸಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುವುದಿಲ್ಲವೆಂದು ಜಾಧವ್ ಹೇಳಿರುವುದಾಗಿ ಪಾಕಿಸ್ತಾನ ತಿಳಿಸಿದ್ದ ಕೆಲವೇ ದಿನಗಳಲ್ಲಿ ಈ ವಿದ್ಯಮಾನ ನಡೆದಿದೆ. ಇದಕ್ಕೂ ಮುನ್ನ, ಜಾಧವ್ರ ಭೇಟಿಗೆ ಮುಕ್ತ ಅವಕಾಶ ನೀಡಲು ಭಾರತ ಆಗ್ರಹಿಸಿತ್ತು.
ಭಾರತದ ಒತ್ತಾಯ: ಜಾಧವ್ಗೆ ಸಂಬಂಧಿಸಿದಂತೆ ಕಾನೂನಿನ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಭಾರತೀಯರ ಪ್ರಾಣ ರಕ್ಷಣೆಗೆ ದೇಶ ಬದ್ಧವಾಗಿದೆ ಎಂದು ಭಾರತ ಹೇಳಿದೆ. ಹಿಂದೆ ಕಾನ್ಸುಲರ್ ಸೇವೆಗೆ ಅವಕಾಶ ನೀಡದ್ದನ್ನು ಹಾಗೂ ಮರಣದಂಡನೆ ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ಗೆ ಮನವಿ ಸಲ್ಲಿಸಿತ್ತು.