ನ್ಯೂಸ್

ಪರೀಕ್ಷೆಗೆ ವೇಗ, ಹೆಚ್ಚಲಿ ನಿಗಾ: ಒಮಿಕ್ರಾನ್ ತಡೆಗೆ ಕೇಂದ್ರ ಸೂತ್ರ, ರಾಜ್ಯಗಳಿಗೆ ಖಡಕ್ ಸೂಚನೆ..

ನವದೆಹಲಿ: ಲಸಿಕೆ ನೀಡಿಕೆಗೆ ವೇಗ, ಹಾಟ್​ಸ್ಪಾಟ್​ಗಳಲ್ಲಿ ತೀವ್ರ ನಿಗಾ. ದಕ್ಷಿಣ ಆಫ್ರಿಕಾದಲ್ಲಿ ತಲ್ಲಣ ಮೂಡಿಸಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಘೋಷವಾಕ್ಯವಿದು. ಕರೊನಾ ಪ್ರಕರಣಗಳ ಏರಳಿತದ ಸಂದರ್ಭದಲ್ಲೇ ಒಮಿಕ್ರಾನ್ ಬರದಂತೆ ತಡೆಯಲು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಅಗತ್ಯವಾಗಿ ಕೈಗೊಳ್ಳಲೇಬೇಕಿರುವ ಕ್ರಮಗಳ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಒಮಿಕ್ರಾನ್ ಕಾರಣದಿಂದ ‘ಅಪಾಯ’ದ ವರ್ಗಕ್ಕೆ ಸೇರಿಸಿರುವ ದೇಶಗಳಿಂದ ಬರುವ ಪ್ರಯಾಣಿಕರ ವಿಚಾರದಲ್ಲಿ ಹೆಚ್ಚಿನ ಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕಳೆದ ವಾರ ಪತ್ತೆಯಾದ ವೈರಾಣುವನ್ನು ‘ಕಳವಳಕಾರಿ’ (ವಿಒಐ) ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ವರ್ಗೀಕರಿಸಿದೆ.

ಕೇಂದ್ರದ ಮುಖ್ಯ ಸೂಚನೆಗಳು

  • ಸೋಂಕು ಪತ್ತೆಗಾಗಿ ಪರೀಕ್ಷೆ ಹೆಚ್ಚಿಸಿ, ನಿಗಾ ವ್ಯವಸ್ಥೆ ಬಲ ಪಡಿಸಬೇಕು ಹಾಗೂ ಲಸಿಕೆ ನೀಡಿಕೆ ವೇಗ ಹೆಚ್ಚಿಸಬೇಕು
  • ಹಾಟ್​ಸ್ಪಾಟ್​ಗಳು ಅಥವಾ ಇತ್ತೀಚಿನ ದಿನಗಳಲ್ಲಿ ಸೋಂಕಿನ ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ನಿಗಾ ಹೆಚ್ಚಿಸಬೇಕು. ಸ್ಯಾಚುರೇಷನ್ ಟೆಸ್ಟಿಂಗ್ ಅಗತ್ಯ ಹಾಗೂ ಎಲ್ಲ ಪಾಸಿಟಿವ್ ಸ್ಯಾಂಪಲ್​ಗಳ್ನು ಜಿನೋಮ್ ಸೀಕ್ವೆನ್ಸಿಂಗ್​ಗಾಗಿ ನಿಯೋಜಿತ ಲ್ಯಾಬ್​ಗಳಿಗೆ ಕಳಿಸಬೇಕು

ಟ್ರಾವೆಲ್ ಹಿಸ್ಟರಿ ಕಡ್ಡಾಯ: ಮೊದಲೆರಡು ಅಲೆಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದ ಮುಂಬೈನಲ್ಲಿ ಒಮಿಕ್ರಾನ್ ತಡೆಗೆ ಕಠಿಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್ ವಾನಾಗಳಿಂದ ಬರುವ ವಿಮಾನ ಪ್ರಯಾಣಿಕರು 15 ದಿನಗಳ ಪ್ರಯಾಣ ವಿವರಗಳನ್ನು (ಟ್ರಾವೆಲ್ ಹಿಸ್ಟರಿ) ಸಲ್ಲಿಸುವುದು ಕಡ್ಡಾಯ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಸ್ಪಷ್ಟಪಡಿಸಿದೆ. ಈ ದೇಶಗಳಿಂದ ಬರುವವರಲ್ಲಿ ಲಸಿಕೆ ಪಡೆದ ಸರ್ಟಿಫಿಕೆಟ್ ಅಥವಾ ಆರ್​ಟಿ-ಪಿಸಿಆರ್ ಟೆಸ್ಟ್ ನೆಗೆಟಿವ್ ವರದಿಯಿದ್ದರೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕವು ಅಂತ್ಯಗೊಂಡಿಲ್ಲ. ಕರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

| ನರೇಂದ್ರ ಮೋದಿ ಪ್ರಧಾನಿ

ಸೋಂಕಿತರ ಗಂಟಲು ದ್ರವದ ಮಾದರಿ ಪರೀಕ್ಷೆಗಾಗಿ ಜಿನೊಮಿಕ್ ಸೀಕ್ವೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಕರೊನಾ ವೈರಾಣು ಹೊಸ ತಳಿ ‘ಒಮಿಕ್ರಾನ್’ ಬಗ್ಗೆ ಡಿ.1ರ ವೇಳೆಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

| ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

ಕೇರಳದಿಂದಲೇ ಸೋಂಕು

ಬೆಂಗಳೂರು: ಮೈಸೂರು, ಬೆಂಗಳೂರು ಗ್ರಾಮಾಂತರ, ಧಾರವಾಡ ಜಿಲ್ಲೆಗಳ ಶಾಲೆ-ಕಾಲೇಜುಗಳ ಹಾಸ್ಟೆಲ್​ಗಳಲ್ಲಿ ಕರೊನಾ ಪ್ರಕರಣ ಸ್ಪೋಟಗೊಂಡಿರುವುದಕ್ಕೆ ಕೇರಳದಿಂದ ಬಂದವರೇ ಕಾರಣವೆಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು, ಮೆಡಿಕಲ್ ಸಿಬ್ಬಂದಿಯಿಂದ ಸೋಂಕು ಉಲ್ಬಣಿಸಿದೆ. ಪ್ರಕರಣ ಹೆಚ್ಚಿರುವ ಕಾಲೇಜು, ಹಾಸ್ಟೆಲ್ ಗಳನ್ನು ನಿಯಂತ್ರಿತ ವಲಯಗಳ ನ್ನಾಗಿ ಗುರುತಿಸಿ ಎಲ್ಲರಿಗೂ ತಪಾಸಣೆ, ಮಾದರಿ ಪರೀಕ್ಷೆ, ಪಾಸಿಟಿವ್ ವರದಿ ಬಂದವರಿಗೆ ಚಿಕಿತ್ಸೆ ವ್ಯವಸ್ಥೆಗೆ ಆಯಾ ಜಿಲ್ಲಾ ಆಡಳಿತಗಳು ಕ್ರಮವಹಿಸಿವೆ. ಧಾರವಾಡದ ಮೆಡಿಕಲ್ ಕಾಲೇಜು ಸಂಪೂರ್ಣ ನಿಯಂತ್ರಿತ ವಲಯವಾಗಿದ್ದು, ಎಲ್ಲರನ್ನೂ ಪರೀಕ್ಷಿಸಲಾಗುತ್ತಿದೆ ಎಂದರು.

ಗಡಿ ಬಂದೋಬಸ್ತ್: ಕೇರಳದ ಗಡಿಯಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 24 ತಾಸು ನಿಗಾ ಇಡಬೇಕು. ಪ್ರತಿಯೊಬ್ಬರೂ ಆರ್​ಟಿಪಿಸಿಆರ್ ನೆಗೆಟಿವ್ ವರದಿ ತಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. 16 ದಿನಗಳಿಂದ ಕೇರಳದಿಂದ ಆಗಮಿಸಿರುವ ಪ್ರತಿಯೊಬ್ಬರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲು ತೀರ್ವನಿಸಲಾಗಿದೆ ಎಂದು ಸಿಎಂ ಹೇಳಿದರು.

3 ದೇಶಗಳವರ ನಿಷೇಧಕ್ಕೆ ಮನವಿ: ರಾಜ್ಯದಲ್ಲಿ ಯಾವುದೇ ಹೊಸ ರೂಪಾಂತರಿ ಪ್ರಕರಣ ಕಂಡು ಬಂದಿಲ್ಲ. ಒಮಿಕ್ರಾನ್ ಬಾಧಿತ 3 ದೇಶಗಳಿಂದ ಪ್ರಯಾಣಿಕರು ಆಗಮಿಸದಂತೆ ನಿರ್ಬಂಧಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ, ಸ್ಥಳದಲ್ಲೇ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ. ವರದಿ ನೆಗಟಿವ್ ಬಂದರೆ ಹೊರಗೆ ಕಳುಹಿಸಲಾಗುತ್ತದೆ. ಪಾಸಿಟಿವ್ ದೃಢವಾದರೆ ಆಸ್ಪತ್ರೆಗೆ ಸೇರಿಸಲಾಗುವುದು ಎಂದರು.

ಲಸಿಕೆಗೆ ವೇಗ: ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಹಂಚಿಕೆ ಶೇ.91 ಪೂರ್ಣಗೊಂಡಿದೆ. ಶೇ. 58 ಜನರಿಗೆ 2ನೇ ಡೋಸ್ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶೇ.70 ಪ್ರಗತಿ ಸಾಧಿಸುವ ಗುರಿ ವಿಧಿಸಿದ್ದು, 80 ಲಕ್ಷ ಡೋಸ್ ದಾಸ್ತಾನಿದೆ ಎಂದು ವಿವರಿಸಿದರು.

ಆತಂಕ ಅನಗತ್ಯ: ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ. ಹೀಗಾಗಿ ಆತಂಕ ಅಗತ್ಯವಿಲ್ಲ ಎಂದು ಸಿಎಂ ಸಮಜಾಯಿಷಿ ನೀಡಿದರು.

ದೈನಂದಿನ ಪರೀಕ್ಷೆ ಹೆಚ್ಚಳ, ಚಟುವಟಿಕೆಗಳಿಗೆ ಕಡಿವಾಣ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ದೈನಂದಿನ ಪರೀಕ್ಷೆಯನ್ನು 60 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಆದೇಶ ಹೊರಡಿಸಿದೆ. 2ನೇ ಡೋಸ್ ಪಡೆದವರ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಿಗೆ 5-15 ಸಾವಿರ ಡೋಸ್ ನೀಡಲಾಗುತ್ತದೆ.

ಮಕ್ಕಳ ಪರೀಕ್ಷೆ: ಕಾಲೇಜು, ಪ್ರೌಢಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಹೋಟೆಲ್​-ರೆಸ್ಟೋ ರೆಂಟ್ ಸಿಬ್ಬಂದಿ, ಮಾಲ್, ಮಾರುಕಟ್ಟೆ ಉದ್ಯೋಗಿಗಳು, ಅಡುಗೆ, ಡೋರ್ ಡೆಲಿವರಿ ಸಿಬ್ಬಂದಿ ಪರೀಕ್ಷೆ ಹೆಚ್ಚಳವಾಗಲಿದೆ. ಪಬ್, ಬಾರ್ ಸೇವಾ ಸಿಬ್ಬಂದಿ, ಟಾಕೀಸ್, ಮಲ್ಟಿಪ್ಲೆಕ್ಸ್​ಗಳ ಅಟೆಂಡೆಂಟ್​ಗಲ್ಲಿರುವವರನ್ನು ಗುರಿಯಾಗಿಸಿಕೊಂಡು ಲಸಿಕಾಕರಣ ಹೆಚ್ಚಿಸ ಬೇಕೆಂದು ಹೇಳಲಾಗಿದೆ.

ಚಟುವಟಿಕೆಗಳಿಗೆ ಕಡಿವಾಣ: ಮೈಸೂರು, ಧಾರವಾಡ, ಬೆಂಗಳೂರು ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಭಾಗವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಮಾರಂಭ ಮುಂದೂಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಮೆಡಿಕಲ್, ಪ್ಯಾರಾ ಮೆಡಿಕಲ್ ಹಾಗೂ ಇತರ ಶೈಕ್ಷಣಿಕ ವ್ಯಾಸಂಗ ನಿರತ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು ಕರೊನಾ ನಿಯಂತ್ರಣ ಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಅನುಸರಿಸಬೇಕು. ಅನಿವಾರ್ಯ ಕಾರ್ಯಕ್ರಮಗಳನ್ನು ಆನ್​ಲೈನ್ ಮೂಲಕ ಆಯೋಜಿಸಬೇಕು. 18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಆಫ್ರಿಕಾ ಸೋಂಕಿತರ 250 ಸಂಪರ್ಕಿತರಿಗೆ ನೆಗೆಟಿವ್

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಆಗಮಿಸಿದ್ದ ಇಬ್ಬರು ಪ್ರಯಾಣಿಕರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರೂ, ಅವರ ಸಂಪರ್ಕಕ್ಕೆ ಬಂದಿದ್ದ 250ಕ್ಕೂ ಅಧಿಕ ಜನರಿಗೆ ಸೋಂಕು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. 14 ದಿನಗಳ ಕ್ವಾರಂಟೈನ್ ಅವಧಿಯಿದ್ದು, ಇಬ್ಬರನ್ನೂ ಖಾಸಗಿ ಹೋಟೆಲ್​ನಲ್ಲಿ ಇರಿಸಲಾಗಿದೆ. ನಿಯಮಾವಳಿ ಅನ್ವಯ ಕ್ವಾರಂಟೈನ್ ಮುಗಿಯುವ ವೇಳೆ ಮತ್ತೆ ಪರೀಕ್ಷಿಸಿ ನೆಗೆಟಿವ್ ಬಂದಲ್ಲಿ ಮನೆಗೆ ಕಳುಹಿಸಲಾಗುತ್ತದೆ ಎಂದು ನಗರ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.