ಶಿವಮೊಗ್ಗ: ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡುವಲ್ಲಿ ಶಿವಮೊಗ್ಗ ಸದಾ ಮುಂದು. ಈ ಬಾರಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್‌ನ್ನು ಸೌಹಾರ್ಧವಾಗಿ ಆಚರಣೆ ಮಾಡಿದಾಗ ಜಿಲ್ಲೆಯ ಗೌರವ ಮತ್ತಷ್ಟು ಹೆಚ್ಚಲಿದೆ. ಕಾನೂನು ಎಲ್ಲರಿಗೂ ಒಂದೇ ಹಾಗೂ ಎಲ್ಲರೂ ಕಾನೂನು ಪಾಲನೆ ಮಾಡಲೇಬೇಕು ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ನಡೆದ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ಯಾವಾಗ ನಡೆಯುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಚಂದ್ರ ಕಾಣಿಸಿಕೊಂಡ ನಂತರ ಮೆರವಣಿಗೆ ದಿನಾಂಕ ನಿಗದಿ ಆಗಲಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ. ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆ ಒಂದೇ ದಿನ ನಿಗದಿಯಾದರೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎರಡೂ ಹಬ್ಬಗಳ ಮೆರವಣಿಗೆ ಒಂದೇ ದಿನ ಬಂದಿರುವುದು ವಿಶೇಷ. ಹಬ್ಬಗಳನ್ನು ಮಾಡುವುದೇ ಸಂಭ್ರಮಕ್ಕೆಂದು. ಇದುವರೆಗೂ ಸೌಹಾರ್ದ, ಸಹಬಾಳ್ವೆ ಬಗ್ಗೆ ಮಾತನಾಡುತ್ತಿದ್ದೆವು. ಈ ಬಾರಿ ಭಗವಂತನೇ ಅದನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನಾವೇ ಪರಿಹಾರ ಮಾಡಿಕೊಳ್ಳೋಣ ಎಂದು ಹೇಳಿದರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಹಬ್ಬಗಳ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ 40-50 ದಿನಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶಾಂತಿಯುತ ಆಚರಣೆಗೆ ಆದ್ಯತೆ ನೀಡಲಾಗುವುದು. ಯಾರಾದರೂ ಶಾಂತಿಗೆ ಭಂಗ ತರುವವರು ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಸೆ.28 ರಂದು ಹಿಂದು ಮಹಾಸಭಾ ಗಣೇಶ ವಿಸರ್ಜನೆ ಇದೆ. ಅಂದೇ ಎರಡೂ ಧರ್ಮದವರ ಹಬ್ಬಗಳ ಮೆರವಣಿಗೆ ಸಾಧ್ಯನಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಬೇರೆ ಬೇರೆ ದಿನ ಮೆರವಣಿಗೆ ಮಾಡಿದರೆ ಅನುಕೂಲ. ಗಣೇಶ ವಿಸರ್ಜನೆಗೆ ಲಕ್ಷಾಂತರ ಜನರು ಸೇರುತ್ತಾರೆ. ಅದೇ ದಿನ ಗಣೇಶ ಮೆರವಣಿಗೆ ಅಲಂಕಾರವನ್ನು ತೆರವು ಮಾಡಬಾರದು. ವಿಸರ್ಜನೆ ಬಳಿಕ ಪೊಲೀಸರೇ ನಿಂತು ತೆಗೆಸಬೇಕು ಎಂದು ಸಲಹೆ ನೀಡಿದರು.
ಎಡಿಸಿ ಸಿದ್ಧಲಿಂಗ ರೆಡ್ಡಿ, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.