ನ್ಯೂಸ್

ಅನಧಿಕೃತ ನೀರಿನ ಸಂಪರ್ಕಕ್ಕೆ ವಿರೋಧ

ಪ್ರಸಿನ್ ಕೆ.ಆರ್

ಪಿರಿಯಾಪಟ್ಟಣ: ಖಾಸಗಿ ಬಡಾವಣೆಯೊಂದಕ್ಕೆ ಕರ್ನಾಟಕ ಗೃಹ ಮಂಡಳಿ ಬಡಾವಣೆಯಿಂದ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯಲು ಮುಂದಾಗಿರುವುದನ್ನು ಕೆಎಚ್‌ಬಿ ಕಾಲನಿ ನಿವಾಸಿಗಳು ವಿರೋಧಿಸಿದ್ದಾರೆ.

ಪಟ್ಟಣದ ಗೋಣಿಕೊಪ್ಪ ರಸ್ತೆಗೆ ಹೊಂದಿಕೊಂಡಂತೆ ಇರುವ ನೂತನ ಕೆಎಚ್‌ಬಿ ಬಡಾವಣೆಯಲ್ಲಿ 850ಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಲಾಗಿದೆ. ವಿಶಾಲವಾದ ರಸ್ತೆ, ಕುಡಿಯುವ ನೀರಿಗೆ ಪೈಪ್ ಸಂಪರ್ಕ, ಒಳಚರಂಡಿ ವ್ಯವಸ್ಥೆ ಮತ್ತು ಕಾಂಕ್ರೀಟ್ ಚರಂಡಿಗಳ ನಿರ್ಮಾಣ, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಮುಖ ಮೂಲ ಸೌಲಭ್ಯಕಲ್ಪಿಸಿದ್ದು, ಬಹುತೇಕ ನಿವೇಶನಗಳು ಮಾರಾಟಗೊಂಡಿವೆ. 50 ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ಕುಡಿಯುವ ನೀರು ಸರಬರಾಜಿಗೆ ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಮತ್ತು ನೆಲಮಟ್ಟದಲ್ಲಿಯೂ ಅಷ್ಟೇ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಳೆದ ಬೇಸಿಗೆಯಲ್ಲಿ ಬಡಾವಣೆಯಲ್ಲಿನ ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದ ಸ್ಥಳೀಯ ನಿವಾಸಿಗಳು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು.

ಸಮೀಪದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಖಾಸಗಿಯಾಗಿ ನಿರ್ಮಿಸುತ್ತಿರುವ ಬಡಾವಣೆಗೆ ಕರ್ನಾಟಕ ಗೃಹ ಮಂಡಳಿ ಬಡಾವಣೆಯಿಂದ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯಲು ಪೈಪ್ ಲೈನ್ ಅಳವಡಿಕೆಗೆ ಶುಕ್ರವಾರ ಗುಂಡಿ ತೋಡಿದ್ದು, ನಿವಾಸಿಗಳು ಶನಿವಾರ ವಿರೋಧ ವ್ಯಕ್ತಪಡಿಸಿದರು.

ಖಾಸಗಿ ಬಡಾವಣೆಯಿಂದ ಶ್ರೀಮಹದೇಶ್ವರ ದೇವಸ್ಥಾನದ ಮುಂಭಾಗದವರೆಗೆ ಪುರಸಭೆಯ ಗಮನಕ್ಕೂ ಬಾರದಂತೆ ಪೈಪ್‌ಲೈನ್ ಅಳವಡಿಸಲಾಗಿದ್ದು, ಪೈಪ್ ಜೋಡಣೆ ಕೆಲಸ ಮಾತ್ರ ಬಾಕಿ ಇದೆ.

ಎರಡನೇ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇರುವುದರಿಂದ ಪುರಸಭೆ ಅಧಿಕಾರಿಗಳ ಕಣ್ತಪ್ಪಿಸಿ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಮುಂದಾಗಿದ್ದಾರೆ. ಕೆಎಚ್‌ಬಿ ಬಡಾವಣೆಯ ನಿವಾಸಿಗಳು ಶನಿವಾರ ಪ್ರತಿರೋಧ ವ್ಯಕ್ತಪಡಿಸಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.