ನ್ಯೂಸ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಆಕ್ಷೇಪ : ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

 ಬೆಂಗಳೂರು:  ಬೃಹತ್ ಬೆಂಗಳೂರು ಮನಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ (ಜಿಬಿಎ)ವನ್ನಾಗಿ ಬದಲಾಯಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಾಗಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯು ಸಂವಿಧಾನದ 74ನೇ ತಿದ್ದುಪಡಿಗೆ (ಸ್ಥಳೀಯ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ನೀಡಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶ ಕಲ್ಪಿಸಿರುವುದು) ತದ್ವಿರುದ್ಧವಾಗಿದೆ. ಆದ್ದರಿಂದ ಕಾಯ್ದೆ ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು

ಬಿಬಿಎಂಪಿಗೆ ಚುನಾವಣೆ ನಡೆದು ಹತ್ತು ವರ್ಷಗಳಾಗಿವೆ. ರಾಜ್ಯ ಸರ್ಕಾರದ ಹೊಸ ಕಾಯ್ದೆಯಿಂದ ಚುನಾವಣೆ ಮತ್ತಷ್ಟು ವಿಳಂಬವಾಗಿದೆ. ಹೀಗಾಗಿ ಬಿಬಿಎಂಪಿಗೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.