ನ್ಯೂಸ್

ವಾರ್ಡ್ ಹೆಸರು ಬದಲಾವಣೆಗೆ ಆಕ್ಷೇಪ : ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಹೆಸರುಗಳ ಬದಲಾವಣೆ ವಾರ್ಡ್‌ಗಳ ಮರುವಿಂಗಡಣೆಯ ಭಾಗವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದಿರುವ ಹೈಕೋರ್ಟ್, ಬೆಂಗಳೂರಿನ ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡಗಣಪತಿ ವಾರ್ಡ್ ಎಂದು ಬದಲಾಯಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಜಾಗೊಳಿಸಿದೆ.

ಬಸವನಗುಡಿ ನಿವಾಸಿ ಸತ್ಯಲಕ್ಷ್ಮೀ ರಾವ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬೆಂಗಳೂರಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಅಲ್ಲಿನ ನಿವಾಸಿಗಳು ಆ ಹೆಸರು ಹೆಮ್ಮೆ ಮೂಡಿಸಿದೆ. ಆದರೆ, ನಗರಾಭಿವೃದ್ಧಿ ಇಲಾಖೆ 2023ರ ಸೆ.25ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಬಸವನಗುಡಿ ವಾರ್ಡ್‌ನ ಹೆಸರನ್ನು ದೊಡ್ಡಗಣಪತಿ ಎಂದು ಬದಲಾಯಿಸಲು ನಿರ್ಧರಿಸಿದೆ. ಹಾಗಾಗಿ ಹೆಸರು ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಬಸವನಗುಡಿ ನಿವಾಸಿಗಳ ಭಾವನಾತ್ಮಕ ವಿಚಾರ. ಹಾಗಾಗಿ ಹಳೆಯ ಹೆಸರು ಉಳಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದಿದ್ದರು.

ವಾದ ಆಲಿಸಿದ ಬಳಿಕ ನ್ಯಾಯಾಲಯ, ವಾರ್ಡ್ ಅಥವಾ ನಗರದ ಹೆಸರು ಬದಲಾಯಿಸುವ ವಿಚಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಷಯದ ಭಾಗವಾಗುವುದಿಲ್ಲ. ಅರ್ಜಿದಾರರು ಹೆಸರು ಬದಲಾವಣೆಯಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ತೊಂದರೆ ಆಗುತ್ತದೆ ಎಂಬುದನ್ನು ಸಾಬೀತುಪಡಿಸಿಲ್ಲ. ಹಾಗಾಗಿ ವಜಾಗೊಳಿಸಲಾಗುವುದು ಎಂದು ಹೇಳಿದೆ. ಅಲ್ಲದೆ, ಸರ್ಕಾರದ ಅಧಿಸೂಚನೆ ಅನ್ವಯ ಬೆಂಗಳೂರು ನಗರದ ಹಲವು ವಾರ್ಡ್‌ಗಳ ಹೆಸರುಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಅದು ನಗರದಲ್ಲಿ ಸರ್ಕಾರ ಕೈಗೊಂಡಿರುವ ವಾರ್ಡ್‌ಗಳ ಮರು ವಿಂಗಡಣೆಯ ಭಾಗವಾಗಿದೆ, ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಆದೇಶಿಸಿದೆ.